ಡಬ್ಲ್ಯುಟಿಟಿ ಯೂತ್ ಕಂಟೆಂಡರ್ ಟೇಬಲ್ ಟೆನಿಸ್‌ ಟೂರ್ನಿ: ಯಶಸ್ವಿನಿಗೆ ಚಿನ್ನ ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ನಾರ್ತ್‌ ಮೆಸಿಡೋನಿಯಾದಲ್ಲಿ ಡಬ್ಲ್ಯುಟಿಟಿ ಯೂತ್ ಕಂಟೆಂಡರ್ ಟೇಬಲ್ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಪೋರ್ಟೊರಿಕೊ ದೇಶದ ಆಸ್ಕರ್ ಜೊತೆಗೂಡಿ ಆಡಿದ ಯಶಸ್ವಿನಿ ಫೈನಲ್ ಪಂದ್ಯದಲ್ಲಿ7-11,7-11, 11-9,11-9,11-9ರಿಂದ ಕ್ರೊವೇಷ್ಯಾದ ಬಾರ್ನಾ ಮತ್ತು ಚೀನಾ ತೈಪೆಯ ಚೆಂಗ್ ಎದುರು ಗೆದ್ದರು. ಕಾಡಿದ ಮಳೆ: ದಿನದಾಟ ರದ್ದು ಹುಬ್ಬಳ್ಳಿ: ಭಾರತ ‘ಎ’ ಹಾಗೂ ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಣ ‘ಟೆಸ್ಟ್‌’ ‍ಪಂದ್ಯದ ಮೂರನೇ ದಿನದಾಟವೂ ಮಳೆಯಿಂದ ರದ್ದಾಯಿತು. ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿದ್ದರೆ, ಎರಡನೇ ದಿನವಾದ ಶುಕ್ರವಾರ 66 ಓವರ್‌ಗಳ ಆಟ ನಡೆದಿತ್ತು. ಶುಕ್ರವಾರ ತಡರಾತ್ರಿ ಮಳೆ ಸುರಿಯಿತಲ್ಲದೆ ಶನಿವಾರ ದಿನವಿಡೀ ದಟ್ಟ ಮೋಡಕವಿದ ವಾತಾವರಣ, ತುಂತುರು ಮಳೆ ಮುಂದುವರಿಯಿತು. ಅಂಪೈರ್‌ಗಳಾದ ಎ.ನಂದಕಿಶೋರ್‌, ಸಂಜಯಕುಮಾರ್‌ ಸಿಂಗ್‌ ಮತ್ತು ರೆಫರಿ ಸತ್ಯಜಿತ್‌ ಸತ್‌ಭಾಯಿ ಅವರು ಶನಿವಾರ ಬೆಳಿಗ್ಗೆ 8.30ಕ್ಕೆ, 11, ಮಧ್ಯಾಹ್ನ 12.40, 2 ಹಾಗೂ 3 ಗಂಟೆಗೆ ಮೈದಾನವನ್ನು ಪರಿಶೀಲಿಸಿದರು. ಆ ಬಳಿಕ ದಿನದಾಟ ರದ್ದುಗೊಳಿಸಲು ನಿರ್ಧರಿಸಿದರು. ಭಾನುವಾರದ ಒಂದು ದಿನದ ಆಟ ಮಾತ್ರ ಬಾಕಿಯಿದೆ. ಭಾರತ ‘ಎ’ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 229 ರನ್‌ ಗಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.