ಪದಕಗಳ ನಿರೀಕ್ಷೆಯಲ್ಲಿ ಕರ್ನಾಟಕ ಬೆಂಗಳೂರು: ಹಲವು ವರ್ಷಗಳಿಂದ ರಾಷ್ಟಮಟ್ಟದ ಸ್ಪರ್ಧೆಗಳಲ್ಲಿ ಪಾರಮ್ಯ ಸಾಧಿಸಿರುವ ಕರ್ನಾಟಕದ ಈಜುಪಟುಗಳು, ಕೆಲವು ಸವಾಲುಗಳ ನಡುವೆಯೂ ಶ್ರೇಷ್ಠ ಸಾಮರ್ಥ್ಯವನ್ನು ಮುಂದುವರಿಸುವ ಛಲದಲ್ಲಿದ್ದು, ಗುವಾಹಟಿಯಲ್ಲಿ ಮಂಗಳವಾರ ಆರಂಭವಾಗುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಗುವಾಹಟಿಯ ಡಾ. ಜಾಕೀರ್ ಹುಸೇನ್‌ ಈಜು ಸಂಕೀರ್ಣದಲ್ಲಿ ಈಜು, ಡೈವಿಂಗ್‌ ಮತ್ತು ವಾಟರ್‌ಪೋಲೊ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕದ ಪ್ರಮುಖ ಈಜುಪಟುಗಳಾದ ಒಲಿಂಪಿಯನ್ ಶ್ರೀಹರಿ ನಟರಾಜ್‌, ರಿಧಿಮಾ ವೀರೇಂದ್ರ ಕುಮಾರ್ ಈ ಚಾಂಪಿಯನ್‌ಷಿಪ್‌ಗೆ ಲಭ್ಯವಾಗುವ ಸಾಧ್ಯತೆಯಿಲ್ಲ. ಸಜನ್‌ ಪ್ರಕಾಶ್‌, ಆರ್ಯನ್‌ ನೆಹ್ರಾ, ಕುಶಾಗ್ರ ರಾವತ್‌ ಮತ್ತು ವೇದಾಂತ್ ಮಾಧವನ್ ಕೂಡ ಕಣಕ್ಕಿಳಿಯುತ್ತಿಲ್ಲ. ಅಪೇಕ್ಷಾ ಫರ್ನಾಂಡೀಸ್‌, ಅನೀಶ್ ಗೌಡ ಮತ್ತು ಸಂಭವ್ ಆರ್‌. ಪೆರುವಿನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿ ವಾಪಸಾಗುತ್ತಿದ್ದು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಶಿವ ಎಸ್‌. ಮತ್ತು ಉತ್ಕರ್ಷ್ ಪಾಟೀಲ್‌ ಕೂಟದಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ಪ್ರಮುಖ ಈಜು ಪಟುಗಳಾಗಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.