ಟಿಟಿ: ಸನಿಲ್, ಶರತ್‌ ಮುನ್ನಡೆ ಸೂರತ್ (ಪಿಟಿಐ): ಸನಿಲ್‌ ಶೆಟ್ಟಿ, ಜಿ.ಸತ್ಯನ್‌ ಮತ್ತು ಅಚಂತಾ ಶರತ್‌ ಕಮಲ್‌ ಅವರು ರಾಷ್ಟ್ರೀಯ ಕ್ರೀಡಾಕೂಟದ ಟೇಬಲ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು. ಪುರುಷರ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿ ಮೂರನೇ ಶ್ರೇಯಾಂಕದ ಸನಿಲ್‌ 11-5, 7-11, 9-11, 11-8, 11-9, 7-11, 11-9 ರಲ್ಲಿ ಉತ್ತರ ಪ್ರದೇಶದ ದಿವ್ಯಾನ್ಶ್‌ ಶ್ರೀವಾಸ್ತವ ಎದುರು ಪ್ರಯಾಸದಿಂದ ಗೆದ್ದರು. ಪ್ರಬಲ ಪೈಪೋಟಿ ನಡೆದ ಪಂದ್ಯದ ನಿರ್ಣಾಯಕ ಗೇಮ್‌ನಲ್ಲಿ 9–9 ರಲ್ಲಿ ಸಮಬಲ ಕಂಡುಬಂದಿತು. ಒತ್ತಡವನ್ನು ಮೆಟ್ಟಿನಿಂತ ಸನಿಲ್‌ ಸತತ ಎರಡು ಪಾಯಿಂಟ್‌ ಕಲೆಹಾಕಿ ಗೆಲುವು ಒಲಿಸಿಕೊಂಡರು. ಸತ್ಯನ್‌ 13-11, 11-6, 11-4, 11-5 ರಲ್ಲಿ ಹರಿಯಾಣದ ವೆಸ್ಲಿ ರೊಸೆರಿಯೊ ವಿರುದ್ದ ಗೆದ್ದರೆ, ಶರತ್‌ 11-9, 11-6, 11-6, 17-15 ರಲ್ಲಿ ಮಹಾರಾಷ್ಟ್ರದ ರವೀಂದ್ರ ಕೋಟ್ಯಾನ್‌ ಅವರನ್ನು ಮಣಿಸಿದರು. ಸ್ಥಳೀಯ ಪ್ರತಿಭೆಗಳಾದ ಹರ್ಮೀತ್‌ ದೇಸಾಯಿ ಮತ್ತು ಮಾನವ್‌ ಠಕ್ಕರ್‌ ಅವರೂ ಮೂರನೇ ಸುತ್ತು ಪ್ರವೇಶಿಸಿದರು. ಮಾನವ್‌ 11-5, 11-6, 11-6, 14-16, 11-6 ರಲ್ಲಿ ಉತ್ತರ ಪ್ರದೇಶದ ಸಾರ್ತ್‌ ಮಿಶ್ರ ಎದುರೂ, ದೇಸಾಯಿ 11-4, 11-5, 11-6, 11-8 ರಲ್ಲಿ ತೆಲಂಗಾಣದ ಮೊಹಮ್ಮದ್‌ ಅಲಿ ವಿರುದ್ಧವೂ ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ಮಾನವ್‌ ಮತ್ತು ಫಿಲ್ಜಾ ಫಾತಿಮಾ ಖಾದ್ರಿ ಅವರು ಅಗ್ರಶ್ರೇಯಾಂಕದ ಸನಿಲ್‌ ಶೆಟ್ಟಿ ಹಾಗೂ ರೀತ್‌ಶ್ರಿಯಾ ಟೆನಿಸನ್‌ ಅವರಿಗೆ ಆಘಾತ ನೀಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.