ಸ್ಕ್ವಾಷ್‌ನ ಚೆನ್ನೈ ಲೆಗ್‌ನ ಟೂರ್ನಿ: ಅಭಯ್‌ಗೆ ಪ್ರಶಸ್ತಿ ಚೆನ್ನೈ: ಭಾರತದ ಅಭಯ್‌ ಸಿಂಗ್‌ ಅವರು ಶುಕ್ರವಾರ ಇಲ್ಲಿ ಕೊನೆಗೊಂಡ ಎಚ್‌ಸಿಎಲ್‌–ಎಸ್‌ಆರ್‌ಎಫ್‌ಐ ಇಂಡಿಯನ್‌ ಟೂರ್‌ ಸ್ಕ್ವಾಷ್‌ನ ಚೆನ್ನೈ ಲೆಗ್‌ನ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು. ಆದರೆ ಸುನಯನ ಕುರುವಿಲ ಫೈನಲ್‌ನಲ್ಲಿ ಎಡವಿದರು. ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದ ಅಭಯ್‌, ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 11-4, 11-3, 11-4 ರಲ್ಲಿ ಈಜಿಪ್ಟ್‌ನ ಖಾಲೆದ್ ಲಬೀಬ್‌ ಎದುರು ಜಯಿಸಿದರು. ಈ ಪಂದ್ಯ 22 ನಿಮಿಷಗಳಲ್ಲಿ ಕೊನೆಗೊಂಡಿತು. ಅಭಯ್‌ ಅವರು ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಈಜಿಪ್ಟ್‌ನ ಯಾಸಿನ್ ಎಲ್‌ಶಫೆಯಿಗೆ ಆಘಾತ ನೀಡಿದ್ದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಈಜಿಪ್ಟ್‌ನ ಕೆನ್ಜಿ ಐಮನ್‌ 11-7, 11-2, 11-6 ರಲ್ಲಿ ಸುನಯನ ಅವರನ್ನು ಮಣಿಸಿ ಚಾಂಪಿಯನ್‌ ಆದರು. ಈ ಟೂರ್ನಿಯಲ್ಲಿ ಆತಿಥೇಯ ಭಾರತ ಅಲ್ಲದೆ ಈಜಿಪ್ಟ್‌, ಕೆನಡಾ, ಫ್ರಾನ್ಸ್‌, ಜಪಾನ್‌, ರಷ್ಯಾ ಮತ್ತು ಸ್ಪೇನ್‌ ಒಳಗೊಂಡಂತೆ 10 ದೇಶಗಳ 48 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.