ಎಚ್‌ಐ: ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ನವದೆಹಲಿ (‍ಪಿಟಿಐ): ಹಾಕಿ ಇಂಡಿಯಾ (ಎಚ್‌ಐ) ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಭಾರತ ತಂಡದ ಮಾಜಿ ನಾಯಕ ದಿಲೀಪ್‌ ಟಿರ್ಕೆ ಅವರು ಉತ್ತರ ಪ್ರದೇಶ ಹಾಕಿ ಸಂಸ್ಥೆ ಅಧ್ಯಕ್ಷ ರಾಕೇಶ್‌ ಕತ್ಯಾಲ್‌ ಮತ್ತು ಹಾಕಿ ಜಾರ್ಖಂಡ್‌ ಅಧ್ಯಕ್ಷ ಭೋಲಾ ನಾಥ್‌ ಸಿಂಗ್‌ ಅವರಿಂದ ಪೈಪೋಟಿ ಎದುರಿಸಲಿದ್ದಾರೆ. ಅ.1 ರಂದು ಎಚ್‌ಐ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದ್ದು, ಮೂವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಸೆ.23 ಕೊನೆಯ ದಿನ. ಈ ನಡುವೆ ಉತ್ತರ ಪ್ರದೇಶ ಹಾಕಿ ಸಂಸ್ಥೆ ಕಾರ್ಯದರ್ಶಿ ಆರ್‌.ಪಿ. ಸಿಂಗ್‌ ಅವರು, ನಾಮಪತ್ರ ವಾಪಸ್‌ ಪಡೆದು ಟಿರ್ಕೆ ಅವರನ್ನು ಬೆಂಬಲಿಸುವಂತೆ ರಾಕೇಶ್‌ ಅವರಿಗೆ ಮನವಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ‘ಮಾಜಿ ಆಟಗಾರ ದಿಲೀಪ್‌ ಟಿರ್ಕೆ ನಾಮಪತ್ರ ಸಲ್ಲಿಸಿರುವುದು ಸಂತಸದ ವಿಷಯ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಕೇಶ್‌ ಅವರಿಗೆ ಮನವಿ ಮಾಡಿದ್ದೇನೆ. ಅವರು ನಾಮಪತ್ರ ವಾಪಸ್‌ ಪಡೆಯುವ ವಿಶ್ವಾಸವಿದೆ’ ಎಂದು ಆರ್‌.ಪಿ.ಸಿಂಗ್‌ ಹೇಳಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕತ್ಯಾಲ್‌, ‘ನಾಮಪತ್ರ ಹಿಂಪಡೆಯುವಂತೆ ನನಗೆ ಮನವಿ ಮಾಡಿರುವುದು ನಿಜ. ಆದರೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಾತುಕತೆಯ ಬಳಿಕ ಒಂದು ತೀರ್ಮಾನಕ್ಕೆ ಬರುತ್ತೇನೆ’ ಎಂದಿದ್ದಾರೆ. ಭೋಲಾ ನಾಥ್‌ ಅವರು ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ, ಕಾರ್ಯದರ್ಶಿ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿ ಹಾಕಿ ಸಂಸ್ಥೆ ಅಧ್ಯಕ್ಷ ಹಿತೇಶ್‌ ಸಿಂದ್ವಾನಿ ಮತ್ತು ಹಾಕಿ ಮಹಾರಾಷ್ಟ್ರ ಉಪಾಧ್ಯಕ್ಷ ಮನೋಜ್‌ ಭೋರೆ ಅವರೂ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಸುಬ್ರಮಣ್ಯ ಸ್ಪರ್ಧೆ: ಹಾಕಿ ಕರ್ನಾಟಕದ ಅಧ್ಯಕ್ಷ ಎಸ್‌.ವಿ.ಎಸ್‌. ಸುಬ್ರಮಣ್ಯ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಅವರಿಗೆ ಹಾಕಿ ಜಮ್ಮು ಮತ್ತು ಕಾಶ್ಮೀರ ದ ಆಸಿಮಾ ಅಲಿ ಪೈಪೋಟಿ ಒಡ್ಡಿದ್ದಾರೆ. ಖಜಾಂಚಿ ಸ್ಥಾನಕ್ಕೆ ಹಾಕಿ ತಮಿಳುನಾಡು ಅಧ್ಯಕ್ಷ ಶೇಖರ್‌ ಜೆ. ಮನೋಹರನ್‌ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆ ಖಚಿತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.