ಪೋಲ್‌ವಾಲ್ಟ್‌: ರೋಸಿ ದಾಖಲೆ ಗಾಂಧಿನಗರ: ತಮಿಳುನಾಡಿನ ರೋಸಿ ಮೀನಾ ಪಾಲ್‌ರಾಜ್‌ ಅವರು ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು. ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 4.20 ಮೀ. ಎತ್ತರ ಜಿಗಿಯಲು ಯಶಸ್ವಿಯಾದರು. ಈ ಮೂಲಕ ವಿ.ಎಸ್‌.ಸುರೇಖಾ 2014 ರಲ್ಲಿ ಸ್ಥಾಪಿಸಿದ್ದ ದಾಖಲೆ (4.15 ಮೀ.) ಮುರಿದರು. ತಮಿಳುನಾಡಿನವರೇ ಆದ ಪವಿತ್ರಾ ವೆಂಕಟೇಶ್ (4 ಮೀ.) ಮತ್ತು ಭರಣಿಕ ಇಳಂಗೋವನ್ (3.90 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಜೆಸ್ವಿನ್‌ಗೆ ಚಿನ್ನ: ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪುರುಷರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಜೆಸ್ವಿನ್‌ ಆಲ್ಡ್ರಿನ್‌ ಚಿನ್ನ ಜಯಿಸಿದರು. 8.26 ಮೀ. ದೂರ ಜಿಗಿದ ಅವರು 2023ರ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೂ ಅರ್ಹತೆ ಪಡೆದರು. ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕೂಟದ ಬೆಳ್ಳಿ ಪದಕ ವಿಜೇತ ಕೇರಳದ ಮುರಳಿ ಶ್ರೀಶಂಕರ್‌ 7.93 ಮೀ. ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರೆ, ಮೊಹಮ್ಮದ್‌ ಅನೀಸ್‌ ಯಹ್ಯಾ (7.92 ಮೀ.) ಮೂರನೆಯವರಾದರು. ಅಮ್ಲನ್‌, ಜ್ಯೋತಿ ವೇಗಿಗಳು: ಅಸ್ಸಾಂನ ಅಮ್ಲನ್‌ ಬೊರ್ಗೊಹೈನ್‌ ಮತ್ತು ಆಂಧ್ರ ಪ್ರದೇಶದ ಜ್ಯೋತಿ ಯರ‍್ರಾಜಿ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ 100 ಮೀ. ಓಟದಲ್ಲಿ ಚಿನ್ನ ಗೆದ್ದು, ‘ವೇಗದ ರಾಜ–ರಾಣಿ’ ಎನಿಸಿಕೊಂಡರು. ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಜ್ಯೋತಿ ಅವರು ದ್ಯುತಿ ಚಾಂದ್‌ ಮತ್ತು ಹಿಮಾ ದಾಸ್‌ ಅವರಂತಹ ಖ್ಯಾತ ಅಥ್ಲೀಟ್‌ಗಳನ್ನು ಹಿಂದಿಕ್ಕಿ 11.51 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ತಮಿಳುನಾಡಿನ ಅರ್ಚನಾ ಸುಶೀಂದ್ರನ್‌ (11.55 ಸೆ.) ಮತ್ತು ಮಹಾರಾಷ್ಟ್ರದ ಡಯಾಂಡ್ರ ವಲಡರೆಸ್‌ (11.62 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.‌ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ (11.69 ಸೆ.) ಆರನೇ ಸ್ಥಾನ ಪಡೆದರೆ, ಹಿಮಾ (11.74 ಸೆ.) ಏಳನೇ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಬೊರ್ಗೊಹೈನ್‌ 10.38 ಸೆ.ಗಳಲ್ಲಿ ಗುರಿ ತಲುಪಿದರು. ತಮಿಳುನಾಡಿನ ವಿ.ಕೆ.ಇಳಕಿಯದಾಸನ್ (10.44 ಸೆ.) ಮತ್ತು ಬಿ.ಶಿವಕುಮಾರ್‌ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. ಟೆನಿಸ್‌: ಕರ್ನಾಟಕ ತಂಡಗಳು ಸೆಮಿಗೆ ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳು ರಾಷ್ಟ್ರೀಯ ಕ್ರೀಡಾಕೂಟದ ಟೆನಿಸ್ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡವು. ಶನಿವಾರ ನಡೆದ ಪುರುಷರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ಆದಿಲ್‌ ಕಲ್ಯಾಣಪುರ್‌ ಮತ್ತು ಎಸ್‌.ಡಿ.ಪ್ರಜ್ವಲ್‌ ದೇವ್‌ 3–6, 6–3, 10–2 ರಲ್ಲಿ ಮಹಾರಾಷ್ಟ್ರದ ಅರ್ಜುನ್‌ ಖಾಡೆ– ಅನ್ವಿತ್‌ ವಿರುದ್ಧ ಪ್ರಯಾಸದಿಂದ ಗೆದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಸೋಹಾ ಸಾದಿಕ್‌– ಶರ್ಮದಾ ಬಾಲು ಜೋಡಿ 6–1, 6–3 ರಲ್ಲಿ ತೆಲಂಗಾಣದ ಪಾವನಿ ಪಾಠಕ್– ಅಭಯಾ ವೇಮುರಿ ಅವರನ್ನು ಮಣಿಸಿತು. ತಂಡ ವಿಭಾಗದಲ್ಲಿ ಕರ್ನಾಟಕದ ಪುರುಷರು ಮತ್ತು ಮಹಿಳೆಯರು ಕಂಚಿನ ಪದಕ ಗೆದ್ದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.