ಫುಟ್‌ಬಾಲ್‌: ಭಾರತ ಪರಾಭವ ಹೊ ಚಿ ಮಿನ್‌ ಸಿಟಿ: ಭಾರತ ತಂಡ ಮಂಗಳವಾರ ಇಲ್ಲಿ ನಡೆದ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ವಿಯೆಟ್ನಾಂ ಕೈಯಲ್ಲಿ 0–3 ಗೋಲುಗಳಿಂದ ಪರಾಭವಗೊಂಡಿತು. ಫಿಫಾ ರ‍್ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿರುವ ಭಾರತ, ತನಗಿಂತ ಮೇಲಿನ ಸ್ಥಾನದಲ್ಲಿರುವ (97) ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡಲು ವಿಫಲವಾಯಿತು. ಫನ್ ವಾನ್‌ ಡಕ್ ಅವರು 10ನೇ ನಿಮಿಷದಲ್ಲಿ ವಿಯೆಟ್ನಾಂಗೆ ಮುನ್ನಡೆ ತಂದಿತ್ತರು. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಮತ್ತು ಡಿಫೆಂಡರ್‌ ಸಂದೇಶ್‌ ಜಿಂಘಾನ್‌ ಅಲ್ಪ ಎಚ್ಚರವಹಿಸಿದ್ದರೆ, ಈ ಗೋಲನ್ನು ತಡೆಯಬಹುದಿತ್ತು. ಮೊದಲ ಅವಧಿಯಲ್ಲಿ ಎದುರಾಳಿ ತಂಡ ಇನ್ನಷ್ಟು ಗೋಲು ಗಳಿಸಲು ಸುನಿಲ್‌ ಚೆಟ್ರಿ ಬಳಗ ಅವಕಾಶ ನೀಡಲಿಲ್ಲ. ಆದರೆ ಎರಡೇ ಅವಧಿಯಲ್ಲಿ ಭಾರತ ತಂಡ ಪಂದ್ಯದ ಮೇಲಿನ ಹಿಡಿತ ಪೂರ್ಣವಾಗಿ ಕೈಬಿಟ್ಟಿತು. ಎದುರಾಳಿ ಆಟಗಾರರು ಗೋಲುಪೆಟ್ಟಿಗೆ ಗುರಿಯಾಗಿಸಿ ಮೇಲಿಂದ ಮೇಲೆ ಆಕ್ರಮಣ ನಡೆಸಿದರು. ಆಟದ ದ್ವಿತೀಯಾರ್ಧದಲ್ಲಿ ನುಯೆನ್‌ ವಾನ್‌ ತೊಯನ್ (49ನೇ ನಿ.) ಮತ್ತು ನುಯೆನ್ ವಾನ್‌ ಕುಯೆಟ್‌ (70ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿ ವಿಯೆಟ್ನಾಂ ತಂಡದ ಗೆಲುವಿನ ಅಂತರ ಹೆಚ್ಚಿಸಿದರು. ಭಾರತ– ವಿಯೆಟ್ನಾಂ ಕೊನೆಯದಾಗಿ 2010 ರಲ್ಲಿ ಆಡಿತ್ತು. ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 3–1 ರಲ್ಲಿ ಗೆದ್ದಿತ್ತು. ಸುನಿಲ್‌ ಚೆಟ್ರಿ ಅವರು ಹ್ಯಾಟ್ರಿಕ್‌ ಮೂಲಕ ಮಿಂಚಿದ್ದರು. ಆದರೆ ಕಳೆದ ಒಂದು ದಶಕದಲ್ಲಿ ವಿಯೆಟ್ನಾಂ ಫುಟ್‌ಬಾಲ್‌ ತಂಡ ಸಾಕಷ್ಟು ಬೆಳವಣಿಗೆ ಸಾಧಿಸಿದ್ದು, ಫಿಫಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನೂರರ ಒಳಗಿನ ಸ್ಥಾನಕ್ಕೆ ಏರಿದೆ. ಚೆಟ್ರಿ ಬಳಗ ಶನಿವಾರ ನಡೆದಿದ್ದ ಮೊದಲ ಸೌಹಾರ್ದ ಪಂದ್ಯದಲ್ಲಿ ಸಿಂಗಪುರ ಜತೆ 1–1 ಗೋಲುಗಳ ಡ್ರಾ ಸಾಧಿಸಿತ್ತು. ವಿಯೆಟ್ನಾಂ ತನ್ನ ಮೊದಲ ಪಂದ್ಯದಲ್ಲಿ ಸಿಂಗಪುರವನ್ನು 4–0 ರಲ್ಲಿ ಮಣಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.