ಚೆಸ್‌: ಕಾರ್ಲ್‌ಸನ್ ಮುನ್ನಡೆ ನ್ಯೂಯಾರ್ಕ್‌: ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್ ಅವರು ಜೂಲಿಯಸ್‌ ಬಾರ್ ಜೆನರೇಷನ್‌ ಕಪ್ ಆನ್‌ಲೈನ್‌ ರ‍್ಯಾಪಿಡ್‌ ಚೆಸ್‌ ಟೂರ್ನಿಯ ಫೈನಲ್‌ನ ಮೊದಲ ಹಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಎರಿಗೈಸಿ ಎದುರು ಸ್ಪರ್ಧಿಸಿರುವ ಅವರು ಎರಡು ಪಂದ್ಯಗಳ ಸೆಟ್‌ನ ಫೈನಲ್‌ನಲ್ಲಿ, ಮೊದಲ ಪಂದ್ಯದಲ್ಲಿ 2.5–0.5ರಿಂದ ಗೆಲುವು ಸಾಧಿಸಿದರು. ಈಗ ಅರ್ಜುನ್‌ ಅವರು ನಾಲ್ಕು ಗೇಮ್‌ಗಳ ಎರಡನೇ ಪಂದ್ಯದಲ್ಲಿ ಗೆದ್ದರೆ ಮಾತ್ರ ಹಣಾಹಣಿ ಬ್ಲಿಟ್ಜ್‌ ಮಾದರಿಯ ಟೈಬ್ರೇಕರ್‌ಗೆ ಸಾಗಲಿದೆ. ಮೊದಲ ಪಂದ್ಯದಲ್ಲಿ ನಾರ್ವೆ ಆಟಗಾರ ಅತ್ಯುತ್ತಮ ಆಟವಾಡಿದರು. ಬಿಳಿಕಾಯಿಗಳೊಂದಿಗೆ ಆಡಿದ ಮೊದಲ ಗೇಮ್‌ಅನ್ನು 40 ನಡೆಗಳಲ್ಲಿ ವಶಪಡಿಸಿಕೊಂಡ ಅವರು, ಎರಡನೇ ಗೇಮ್‌ನಲ್ಲೂ 29 ನಡೆಗಳಲ್ಲಿ ಗೆಲುವು ಒಲಿಸಿಕೊಂಡರು. ಮೂರನೇ ಗೇಮ್‌ಅನ್ನು ಅರ್ಜುನ್ ಡ್ರಾ ಮಾಡಿಕೊಂಡರೂ ವಿಶ್ವ ಚಾಂಪಿಯನ್ ಆಟಗಾರ ಪಂದ್ಯ ಗೆಲ್ಲುವುದನ್ನು ತಡೆಯಲಾಗಲಿಲ್ಲ. ಅರ್ಜುನ್‌ ಅವರು ವಿಯೆಟ್ನಾಂನ ಲಿಯೆಮ್‌ ಕ್ವಾಂಗ್‌ ಲೀ ಅವರನ್ನು ಸೋಲಿಸಿ ಫೈನಲ್‌ ತಲುಪಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.