ಮ್ಯಾರಥಾನ್‌: ಕಿಪ್ಚೋಗಿ ವಿಶ್ವದಾಖಲೆ ಬರ್ಲಿನ್‌ (ಎಪಿ): ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಕೆನ್ಯಾದ ಎಲಿಯುಡ್‌ ಕಿಪ್ಚೋಗಿ ಅವರು ಪುರುಷರ ಮ್ಯಾರಥಾನ್‌ನಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಉತ್ತಮಪಡಿಸಿಕೊಂಡರು. ಭಾನುವಾರ ನಡೆದ ಬರ್ಲಿನ್‌ ಮ್ಯಾರಥಾನ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು 42.2 ಕಿ.ಮೀ ದೂರವನ್ನು 2 ಗಂಟೆ 1 ನಿಮಿಷ 9 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ನಾಲ್ಕು ವರ್ಷಗಳ ಹಿಂದೆ ಬರ್ಲಿನ್‌ ಮ್ಯಾರಥಾನ್‌ನಲ್ಲೇ ತಾವು ಸ್ಥಾಪಿಸಿದ್ದ ವಿಶ್ವದಾಖಲೆಯನ್ನು 30 ಸೆಕೆಂಡುಗಳಿಂದ ಉತ್ತಮಪಡಿಸಿಕೊಂಡರು. 2018 ರಲ್ಲಿ ನಡೆದ ಸ್ಪರ್ಧೆಯಲ್ಲಿ 2:01.39 ಸೆ.ಗಳಲ್ಲಿ ಗುರಿ ತಲುಪಿದ್ದರು. ಎಥಿಯೋಪಿಯದ ಟಿಗಿಸ್ಟ್ ಅಸೆಫಾ ಮಹಿಳೆಯರ ವಿಭಾಗದಲ್ಲಿ ಅಚ್ಚರಿಯ ಗೆಲುವು ಪಡೆದರು. ಅವರು 2 ಗಂಟೆ 15 ನಿ. 37 ಸೆ.ಗಳಲ್ಲಿ ಗುರಿ ತಲುಪಿದರು. ಪುರುಷರ ವಿಭಾಗದಲ್ಲಿ ಕೆನ್ಯಾದ ಮಾರ್ಕ್‌ ಕೊರಿರ್‌ (2 ಗಂ. 5 ನಿ. 58 ಸೆ.) ಎರಡನೇ ಸ್ಥಾನ ಪಡೆದರೆ, ಎಥಿಯೋಪಿಯದ ಟಡು ಅಬಾಟೆ (2 ಗಂ. 6 ನಿ. 28 ಸೆ.) ಮೂರನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ಕಿಪ್ಚೋಗಿ ಅವರಿಗೆ ಬರ್ಲಿನ್‌ನಲ್ಲಿ ದೊರೆತ ನಾಲ್ಕನೇ ಗೆಲುವು ಇದು. ಈ ಮೂಲಕ ಎಥಿಯೋಪಿಯದ ದಿಗ್ಗಜ ಓಟಗಾರ ಹೈಲಿ ಗೆಬ್ರ್‌ಸೆಲಾಸಿ ಅವರ ಸಾಧನೆಯನ್ನು ಸರಿಗಟ್ಟಿದರು. ಕಿಪ್ಚೊಗಿ ಅವರಂತೆ ಗೆಬ್ರ್‌ಸೆಲಾಸಿ ಕೂಡಾ ಇಲ್ಲಿ ಎರಡು ಸಲ (2007 ಮತ್ತು 2008 ರಲ್ಲಿ) ವಿಶ್ವದಾಖಲೆ ಸ್ಥಾಪಿಸಿದ್ದರು. ಕಿಪ್ಚೋಗಿ ಅವರು ಆರಂಭದಿಂದಲೇ ಉತ್ತಮ ವೇಗ ಕಾಯ್ದುಕೊಂಡರು. ಮೊದಲ 10 ಕಿ.ಮೀ ದೂರವನ್ನು ಕೇವಲ 28 ನಿ. 23 ಸೆ.ಗಳಲ್ಲಿ ಕ್ರಮಿಸಿದರು. ಕಿಪ್ಚೋಗಿ ಮತ್ತು ಎಥಿಯೋಪಿಯದ ಅಂದಮ್ಲಾಕ್‌ ಬೆಲಿಹು ಅವರು ಅರ್ಧಹಾದಿಯನ್ನು 59.51 ಸೆ.ಗಳಲ್ಲಿ ಕ್ರಮಿಸಿದರು. 30 ಕಿ.ಮೀ ದೂರದವರೆಗೂ ಕಿಪ್ಚೋಗಿ ಜತೆಗಿದ್ದ ಬೆಲಿಹು ಆ ಬಳಿಕ ಹಿಂದೆ ಬಿದ್ದರು. ಕೊನೆಯ 10 ಕಿ.ಮೀನಲ್ಲಿ ಮುನ್ನಡೆ ಕಾಪಾಡಿಕೊಂಡ ಕಿಪ್ಚೋಗಿ, ಅಗ್ರಸ್ಥಾನ ಪಡೆದರು. ಬೆಲಿಹು (2ಗಂ. 6 ನಿ. 40 ಸೆ.) ನಾಲ್ಕನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.