ಚಿನ್ನಕ್ಕೆ ಗುರಿಯಿಟ್ಟ ರುದ್ರಾಕ್ಷ್‌: ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ ಚಾಂಪಿಯನ್‌ ಕೈರೊ, ಈಜಿಪ್ಟ್: ಭಾರತದ ಯುವ ಶೂಟಿಂಗ್ ಪಟು ರುದ್ರಾಕ್ಷ್‌ ಪಾಟೀಲ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪುರುಷರ 10 ಮೀಟರ್ಸ್ ಏರ್‌ ರೈಫಲ್‌ ವಿಭಾಗದಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದ ಭಾರತದ ಎರಡನೇ ಶೂಟರ್ ಎನಿಸಿಕೊಂಡರು. ಈ ಹಿಂದೆ ಅಭಿವನ್ ಬಿಂದ್ರಾ ಈ ಶ್ರೇಯ ಗಳಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ ಚಾಂಪಿಯನ್‌ ಬಿಂದ್ರಾ, ಕ್ರೊವೇಷ್ಯಾದ ಜಾಗ್ರೇಬ್‌ನಲ್ಲಿ ನಡೆದ 2006ರ ವಿಶ್ವ ಕೂಟದ 10 ಮೀ. ಏರ್‌ ರೈಫಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 18 ವರ್ಷದ ರುದ್ರಾಕ್ಷ್‌,ಇಲ್ಲಿ ಚಿನ್ನ ಗೆಲ್ಲುವ ಮೂಲಕ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಗಳಿಸಿದರು. ಈ ಮೂಲಕ ಪ್ಯಾರಿಸ್ ಟಿಕೆಟ್ ಪಡೆದ ಭಾರತದ ಎರಡನೇ ಶೂಟರ್ ಎನಿಸಿಕೊಂಡರು. ಇತ್ತೀಚೆಗೆ ಕ್ರೊವೇಷ್ಯಾದಲ್ಲಿ ನಡೆದ ಶಾಟ್‌ಗನ್ ವಿಶ್ವ ಚಾಂಪಿಯನ್‌ಷಿಪ್‌ ಪುರುಷರ ಟ್ರ್ಯಾಪ್‌ನಲ್ಲಿ ಭೋವನೀಶ್‌ ಮೆಂಡಿರಟ್ಟಾ ನಾಲ್ಕನೇ ಸ್ಥಾನ ಗಳಿಸಿ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದರು. ಫೈನಲ್‌ನಲ್ಲಿ ರುದ್ರಾಕ್ಷ್‌ 17–13ರಿಂದ ಇಟಲಿಯ ಡ್ಯಾನಿಲೊ ಡೆನಿಸ್‌ ಸೊಲಾಜೊ ಅವರ ಸವಾಲು ಮೀರಿದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿರುವ ರುದ್ರಾಕ್ಷ್‌ ಆರಂಭದಲ್ಲಿ 4–10ರಿಂದ ಹಿನ್ನಡೆಯಲ್ಲಿದ್ದರು. ಬಳಿಕ ಪುಟಿದೆದ್ದು, ಗೆಲುವು ಒಲಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.