ಭಾರತಕ್ಕೆ 13ನೇ ಸ್ಥಾನ ಸಾಂಟಾಂಡೆರ್‌, ಸ್ಪೇನ್‌ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆದ ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಿಶ್ರ ತಂಡ ವಿಭಾಗದಲ್ಲಿ 13ನೇ ಸ್ಥಾನ ಗಳಿಸಿದರು. 13 ರಿಂದ 16ರ ವರೆಗಿನ ಸ್ಥಾನ ನಿರ್ಣಯಿಸಲು ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 4–1 ರಲ್ಲಿ ಜರ್ಮನಿ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಭಾರತದ ಮಿಶ್ರ ಡಬಲ್ಸ್‌ ಜೋಡಿ ಸಮರವೀರ್‌– ರಾಧಿಕಾ ಶರ್ಮಾ 21–18, 21–16 ರಲ್ಲಿ ಜರ್ಮನಿಯ ಜೇರ್ನ್ ಶ್ಲೆವೊಟ್‌– ಜೂಲಿಯಾ ಮೆಯರ್‌ ವಿರುದ್ಧ ಗೆದ್ದು 1–0 ಮುನ್ನಡೆ ತಂದಿತ್ತಿತು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭರತ್‌ ರಾಘವ್‌ 14–21, 21–17, 21–18 ರಲ್ಲಿ ಸಂಜೀವಿ ಪದ್ಮನಾಭನ್‌ ಅವರನ್ನು ಮಣಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಪುರುಷರ ಡಬಲ್ಸ್‌ನಲ್ಲಿ ಅರ್ಶ್‌ ಮೊಹಮ್ಮದ್‌–ಅಭಿನವ್‌ ಠಾಕೂರ್‌ 14–21, 22–24 ರಲ್ಲಿ ಜೊನಾಥನ್‌ ಡ್ರೆಸ್ಪ್‌– ಸೈಮನ್‌ ಕ್ರಾಕ್ಸ್ ಎದುರು ಸೋತರು. ಇದರಿಂದ ಜರ್ಮನಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿತು. ಆದರೆ ಭರವಸೆಯ ಆಟಗಾರ್ತಿ ಉನ್ನತಿ ಹೂಡಾ ಮಹಿಳೆಯರ ಸಿಂಗಲ್ಸ್‌ನಲ್ಲಿ 21–8, 21–6 ರಲ್ಲಿ ಸೆಲಿನ್ ಹಶ್ ಅವರನ್ನು ಮಣಿಸಿ ಭಾರತದ ಗೆಲುವು ಖಚಿತಪಡಿಸಿಕೊಂಡರು. ಕೊನೆಯಲ್ಲಿ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಶ್ರೇಯಾ ಬಾಲಾಜಿ– ಶ್ರೀನಿಧಿ ನಾರಾಯಣನ್ 21–13, 21–13 ರಲ್ಲಿ ಜೂಲಿಯಾ ಮೆಯರ್– ಕಾರಾ ಸೀಬ್ರೆಶ್ಟ್‌ ಅವರನ್ನು ಮಣಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಭಾರತ 1–3 ರಲ್ಲಿ ಮಲೇಷ್ಯಾ ಎದುರು ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.