ಲಕ್ಷ್ಯಸೇನ್‌ –ಕಿದಂಬಿ ಶ್ರೀಕಾಂತ್ ಮುಖಾಮುಖಿ ಪ್ಯಾರಿಸ್‌: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಮಂಗಳವಾರದಿಂದ ಇಲ್ಲಿ ಆರಂಭವಾಗುವ ಟೂರ್ನಿಯಲ್ಲಿ ಭಾರತದ ಇಬ್ಬರೂ ಆಟಗಾರರು ಸಿಂಗಲ್ಸ್ ವಿಭಾಗದಲ್ಲಿ ಸೆಣಸಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಎಂಟು ಮತ್ತು 11ನೇ ಸ್ಥಾನದಲ್ಲಿರುವ ಲಕ್ಷ್ಯ ಮತ್ತು ಶ್ರೀಕಾಂತ್ ವೃತ್ತಿಜೀವನದಲ್ಲಿ ಎರಡನೇ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ಇತ್ತೀಚೆಗೆ ಮುಗಿದ ಡೆನ್ಮಾರ್ಕ್‌ ಓಪನ್ ಟೂರ್ನಿಯಲ್ಲಿ ಲಕ್ಷ್ಯ, ಉತ್ತಮ ಸಾಮರ್ಥ್ಯ ತೋರಿದ್ದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ತನಗಿಂತ ಕೆಳ ರ‍್ಯಾಂಕಿನ ಜಪಾನ್ ಆಟಗಾರ ಕೊಡಾಯಿ ನರವೊಕಾ ಎದುರು ಎಡವಿದ್ದರು. ಲಕ್ಷ್ಯ ಮತ್ತು ಶ್ರೀಕಾಂತ್‌ ಈ ಹಿಂದೆ 2021ರ ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಲಕ್ಷ್ಯ ಅವರನ್ನು ಮಣಿಸಿದ್ದ ಶ್ರೀಕಾಂತ್‌ ಫೈನಲ್‌ ತಲುಪಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದರು. ಫ್ರೆಂಚ್‌ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆದ್ದವರು ಎರಡನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸನ್ ಅವರನ್ನು ಎದುರಿಸುವರು. ಭಾರತದ ಇನ್ನೊಬ್ಬ ಆಟಗಾರ ಎಚ್‌.ಎಸ್‌. ಪ್ರಣಯ್ ಅವರು ಮಲೇಷ್ಯಾದ ಡರೆನ್ ಲಿವ್ ಎದುರು ಆಡಲಿದ್ದಾರೆ. ಡರೆನ್ ಎದುರು ಆಡಿದ 11ರ ಪೈಕಿ ಏಳು ಪಂದ್ಯಗಳಲ್ಲಿ ಪ್ರಣಯ್ ಜಯ ಸಾಧಿಸಿದ್ದು ಇಲ್ಲಿಯೂ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಒಲಿಂಪಿಕ್ಸ್ ಕಂಚು ವಿಜೇತೆ, ಸೈನಾ ನೆಹ್ವಾಲ್ ಅವರು ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜರ್ಮನಿಯ ಯುವೊನ್ನೆ ಲಿ ಅವರನ್ನು ಎದುರಿಸುವರು. 2020ರಲ್ಲಿ ನಡೆದ ಪಂದ್ಯವೊಂದರಲ್ಲಿ ಭಾರತದ ಆಟಗಾರ್ತಿ ಲಿ ಅವರನ್ನು ಮಣಿಸಿದ್ದರು. ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಎಂ.ಆರ್. ಅರ್ಜುನ್– ಧ್ರುವ ಕಪಿಲ ಕಣಕ್ಕಿಳಿಯಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌, ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್– ತನಿಶಾ ಕ್ರಾಸ್ತೊ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.