ರ‍್ಯಾಂಕಿಂಗ್‌: ಐದನೇ ಸ್ಥಾನಕ್ಕೆ ಸಿಂಧು ನವದೆಹಲಿ: ಭಾರತದ ಪಿ.ವಿ. ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್ ಅವರು ಕ್ರಮವಾಗಿ ಮಹಿಳಾ ಮತ್ತು ಪುರುಷರ ವಿಭಾಗದ ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಐದು ಮತ್ತು 12ನೇ ಸ್ಥಾನಕ್ಕೇರಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಸಿಂಧು ಯಾವುದೇ ಟೂರ್ನಿಯಲ್ಲೂ ಕಣಕ್ಕಿಳಿದಿರಲಿಲ್ಲ. ಪಾದದ ಗಾಯದ ಕಾರಣ ಅವರು ವಿಶ್ರಾಂತಿ ಪಡೆದಿದ್ದರು. ಸದ್ಯ ಚೇತರಿಸಿಕೊಂಡಿರುವ ಸಿಂಧು ಸೋಮವಾರ ಅಭ್ಯಾಸ ನಡೆಸಿದ್ದಾರೆ. ವಿಶ್ವದ ಮಾಜಿ ಎರಡನೇ ಕ್ರಮಾಂಕದ ಆಟಗಾರ್ತಿ ಸಿಂಧು, ಮೂರು ವರ್ಷಗಳ ಬಳಿಕ ಅಗ್ರ 5ರೊಳಗಿನ ಸ್ಥಾನಕ್ಕೆ ಮರಳಿದ್ದಾರೆ. ಸದ್ಯ ಅವರು 26 ಟೂರ್ನಿಗಳಿಂದ 87,218 ಪಾಯಿಂಟ್ಸ್ ಗಳಿಸಿದ್ದಾರೆ. ಪ್ರಣಯ್ ಅವರು ಇತ್ತೀಚೆಗೆ ನಡೆದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ಅವರ ಬಳಿ 64,330 ಪಾಯಿಂಟ್‌ಗಳಿವೆ. ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್ ಕ್ರಮವಾಗಿ 8 ಮತ್ತು 11ನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಎಂಟನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಎಂ.ಆರ್. ಅರ್ಜುನ್ ಮತ್ತು ಧ್ರುವ ಕಪಿಲ ಜೋಡಿಯು ಎರಡು ಸ್ಥಾನ ಬಡ್ತಿ ಪಡೆದು, 19ನೇ ಸ್ಥಾನದಲ್ಲಿದೆ. ಮಹಿಳಾ ಡಬಲ್ಸ್ ಆಟಗಾರ್ತಿಯರಾದ ತ್ರಿಶಾ ಜೋಲಿ–ಗಾಯತ್ರಿ ಗೋಪಿಚಂದ್‌ ಮತ್ತು ಮಿಶ್ರ ಡಬಲ್ಸ್ ಜೋಡಿ ಇಸಾನ್ ಭಟ್ನಾಗರ್– ತನಿಶಾ ಕ್ರಾಸ್ತೊ ಕ್ರಮವಾಗಿ 27 ಮತ್ತು 29ನೇ ಸ್ಥಾನಕ್ಕೇರಿದ್ದಾರೆ. ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿ ರೆಡ್ಡಿ ಅವರು ಮಹಿಳಾ ಡಬಲ್ಸ್‌ನಲ್ಲಿ 24ನೇ ಸ್ಥಾನಕ್ಕೆ ಜಾರಿದ್ದಾರೆ. ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಒಂದು ಸ್ಥಾನ ಕುಸಿತ ಕಂಡು 33ನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.