ಜಪಾನ್‌ಗೆ ಸೋಲುಣಿಸಿದ ಭಾರತ ಜೊಹರ್, ಮಲೇಷ್ಯಾ: ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಜೊಹರ್ ಕಪ್ ಹಾಕಿ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಭಾರತ 5–1ರಿಂದ ಜಪಾನ್ ತಂಡವನ್ನು ಮಣಿಸಿತು. ಭಾರತ ತಂಡಕ್ಕಾಗಿ ನಾಯಕ ಉತ್ತಮ್ ಸಿಂಗ್‌ ಮೂರನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 12ನೇ ನಿಮಿಷದಲ್ಲಿ ಕೈಚಳಕ ತೋರಿದ ರೋಹಿತ್ ಮುನ್ನಡೆಯನ್ನು ಹೆಚ್ಚಿಸಿದರು. ಜಪಾನ್‌ನ ಇಕುಮಿ ಸಯಿಕಿ 15ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ತಂಡದ ಹಿನ್ನಡೆಯನ್ನು ತಗ್ಗಿಸಿದರು. ಆದರೆ ಬಳಿಕ ಜಾನ್ಸನ್‌ ಪೂರ್ಟಿ (21ನೇ ನಿ.), ಬಾಬಿ ಸಿಂಗ್ ಧಾಮಿ (31ನೇ ನಿ.) ಮತ್ತು ಅಮನ್‌ದೀಪ್ ಲಾಕ್ರಾ (51ನೇ ನಿ.) ಗಳಿಸಿದ ಗೋಲುಗಳು ಭಾರತದ ಗೆಲುವನ್ನು ಖಚಿತಪಡಿಸಿದವು. ಜಪಾನ್‌ಗೆಹೆಚ್ಚು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ ಭಾರತದ ಆಟಗಾರರು ಭದ್ರ ತಡೆಗೋಡೆಯಾಗಿ ಗೋಲು ಗಳಿಕೆಗೆ ಅವಕಾಶ ನೀಡಲಿಲ್ಲ. ಭಾರತ ತಂಡವು ತನ್ನ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.