ಸುನೀಲಗೆ 'ಕಿತ್ತೂರು ಕೇಸರಿ', ಲೀನಾಗೆ ಚನ್ನಮ್ಮ ಮಹಿಳಾ ಕೇಸರಿ' ಕಿರೀಟ ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಸುನೀಲ ಪಡತಾರೆ 'ಕಿತ್ತೂರು ಕೇಸರಿ' ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಲೀನಾ ಸಿದ್ಧಿ 'ಚನ್ನಮ್ಮ ಮಹಿಳಾ‌ ಕೇಸರಿ' ಆಗಿ ಹೊರಹೊಮ್ಮಿದರು. ಮಂಗಳವಾರ ತಡರಾತ್ರಿಯವರೆಗೂ ನಡೆದ ಪುರುಷರ 85 ಕೆ.ಜಿ ಮೇಲ್ಪಟ್ಟವರ ವಿಭಾಗದ ಪಂದ್ಯದಲ್ಲಿ ಸುನೀಲ ಉತ್ತಮ ಪಟ್ಟುಗಳನ್ನು ಹಾಕಿದರು. 10-0 ಅಂಕಗಳಿಂದ ಮಹಾರಾಷ್ಟ್ರದ ಸುನೀಲ ಕತಾಳ ಅವರನ್ನು ಸೋಲಿಸಿದರು. ರಾಷ್ಟ್ರಮಟ್ಟದ ಮಹಿಳೆಯರ 65 ಕೆ.ಜಿ ಮೇಲ್ಪಟ್ಟವರ ವಿಭಾಗದಲ್ಲಿ ಲೀನಾ ಅವರು ಬಳ್ಳಾರಿಯ ಪರಿ ಚೌಧರಿ ಅವರನ್ನು 'ಚಿತ್'ಗೊಳಿಸಿದರು. ರಾಜ್ಯಮಟ್ಟ: ಮಹಿಳೆಯರ 46 ಕೆ.ಜಿ ವಿಭಾಗದಲ್ಲಿ ಗೋಕಾಕದ ಅಮೂಲ್ಯ ಕುಂದರಗಿ ಧಾರವಾಡದ ಪುಷ್ಪಾ ನಾಯಕ ಅವರನ್ನು ಮಣಿಸಿದರು. 60 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಲಕ್ಷ್ಮಿ ಪಾಟೀಲ, ರಾಧಿಕಾ ತೊಂಡಿಹಾಳ ಅವರನ್ನು ಪರಾಭವಗೊಳಿಸಿದರು. 65 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಪಿ.ಪಿ. ಸಿದ್ದಿ ಅವರು ಮನಿಷಾ ಸಿದ್ದಿ ಅವರನ್ನು ಸೋಲಿಸಿದರು. ಪುರುಷರ 57 ಕೆ.ಜಿ ವಿಭಾಗದಲ್ಲಿ ಹಳಿಯಾಳದ ರೋಹನ್ ದೊಡಮನಿ ದಾವಣಗೆರೆಯ ವಿರೂಪಾಕ್ಷಿ ಈ. ಅವರನ್ನು ಸೋಲಿಸಿದರು. 65 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಸಂಜೀವ್ ಕೊರವರ ‌ಬೆಳಗಾವಿಯ ಸಚಿನ್ ಶಿರಗುಪ್ಪಿ ಮಣಿಸಿ 'ಕಿತ್ತೂರು ಕಿಶೋರ' ಪ್ರಶಸ್ತಿ ಮುಡಿಗೇರಿಸಿಕೊಂಡರು. 70 ಕೆ.ಜಿ ವಿಭಾಗದಲ್ಲಿ‌ ಧಾರವಾಡದ ಮಲ್ಲಿಕಾರ್ಜುನ ತೋಳಮಟ್ಟಿ ಬೆಳಗಾವಿಯ ಸಂತೋಷ‌ ಮೇತ್ರಿ ಪರಾಭವಗೊಳಿಸಿದರು. 74 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಮಲ್ಲೇಶ‌ ಮೇತ್ರಿ ಅವರು, ಮಹೇಶ ಮೇತ್ರಿ ವಿರುದ್ಧ ಗೆದ್ದು 'ಕಿತ್ತೂರು ಕುಮಾರ' ಪ್ರಶಸ್ತಿಗೆ ಭಾಜನರಾದರು. 85 ಕೆ.ಜಿ ವಿಭಾಗದಲ್ಲಿ ಮುಧೋಳದ ಬಾಪುಸಾಹೇಬ ಶಿಂಧೆ ಬೆಳಗಾವಿಯ ಕಾರ್ತಿಕ ಹಿಟ್ಟಣಗಿ ಅವರನ್ನು ಸೋಲಿಸಿದರು.ಈ ಟೂರ್ನಿಯಲ್ಲಿ ಎ.ಆರ್.ಕೆ. ನಾಗರಾಜ್, ಹನುಮಂತ ಪಾಟೀಲ, ತುಕಾರಾಮ ಗಾವಡಾ, ಕಾಳೇಶ್ ನ್ಯಾಮಗೌಡ, ಶರಣಗೌಡ ಬೇಲೇರಿ, ಎಸ್.ಕೆ.ಪಕಾಲೆ, ರಾಮ ಬುಡಕಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.