ಇಂಡೊನೇಷ್ಯಾ ಓಪನ್‌: ಹೋರಾಡಿ ಸೋತ ಶ್ರೀಕಾಂತ್‌ ‌ಸಿಂಗಲ್ಸ್‌ ಸೆಮಿಫೈನಲ್‌ಗೆ ಪ್ರಣಯ್‌ ಜಕಾರ್ತಾ (ಪಿಟಿಐ): ಭಾರತದ ಎಚ್‌.ಎಸ್‌. ಪ್ರಣಯ್‌, ಇಂಡೊನೇಷ್ಯಾ ಓಪನ್‌ ವಿಶ್ವ ಟೂರ್‌ ಸೂಪರ್ 1000 ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದರು. ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಜೋಡಿಯನ್ನು ಮಣಿಸಿದ ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಕೂಡ ಶುಕ್ರವಾರ ಸೆಮಿಫೈನಲ್‌ ತಲುಪಿದರು. ಏಳನೇ ಶ್ರೇಯಾಂಜಕದ ಪ್ರಣಯ್‌ ದಿನದ ಕೊನೆಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಕೊಡೈ ನರವೊಕಾ ಅವರನ್ನು 21–18, 21–6 ರಲ್ಲಿ ನೇರ ಸೆಟ್‌ಗಳಿಂದ ಸೋಲಿಸಿದರು. ನರವೊಕಾ ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಆದರೆ, ವಿಶ್ವ ಚಾಂಪಿಯನ್‌ ರಜತ ಪದಕ ವಿಜೇತ ಕಿದಂಬಿ ಶ್ರೀಕಾಂತ್‌ ದಿನದ ಮೊದಲ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೀನಾದ ಲಿ ಶಿ ಫೆಂಗ್‌ ಎದುರು ಮೂರು ಗೇಮ್‌ಗಳ ಹೋರಾಟದಲ್ಲಿ ಸೋಲನುಭವಿಸಿದರು. ವಿಶ್ವದ 10ನೇ ನಂಬರ್ ಆಟಗಾರ ಫೆಂಗ್‌ 69 ನಿಮಿಷಗಳವರೆಗೆ ಬೆಳೆದ ಪಂದ್ಯದಲ್ಲಿ 21–14, 14–21, 21–12 ರಲ್ಲಿ ವಿಶ್ವ ಕ್ರಮಾಂಕದಲ್ಲಿ 22ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಮೇಲೆ ಜಯಗಳಿಸಿ ಸೆಮಿಫೈನಲ್‌ಗೆ ಮುನ್ನಡೆದರು. ಪ್ರಣಯ್‌ ಮುಂದಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ವಿಕ್ಟರ್‌ ಆಕ್ಸೆಲ್‌ಸನ್‌ ಅವರನ್ನು ಎದುರಿಸಲಿದ್ದಾರೆ. ಡೆನ್ಮಾರ್ಕ್‌ನ ಆಕ್ಸೆಲ್‌ಸನ್‌ 21–5, 21–19 ರಿಂದ ಚೀನಾ ತೈಪೆಯ ಟಿಯನ್ ಚೆನ್‌ ಚೌ ವಿರುದ್ಧ ಗೆಲುವನ್ನು ಸಾಧಿಸಿದರು. ಡಬಲ್ಸ್‌ನಲ್ಲಿ ಏಳನೇ ಶ್ರೇಯಾಂಕದ ಪಡೆದಿರುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಶಿಸ್ತಿನ ಆಟವಾಡಿ 21–13, 21–13 ರಿಂದ ಅಗ್ರ ಶ್ರೇಯಾಂಕದ ಇಂಡೊನೇಷ್ಯಾ ಜೋಡಿ ಆಲ್ಫಿಯಾನ್‌ ಮತ್ತು ಅಡ್ರಿಯಾಂಟೊ ಮೇಲೆ ಜಯಗಳಿಸಲು 41 ನಿಮಿಷ ತೆಗೆದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.