ಸಿಂಧು, ಪ್ರಣಯ್‌ ಶುಭಾರಂಭ ಜಕಾರ್ತ: ಪಿ‌.ವಿ. ಸಿಂಧು ಮಂಗಳವಾರ ಆರಂಭಗೊಂಡ ಇಂಡೊನೇಷ್ಯಾ ಓಪನ್‌ ಬಿಡಬ್ಲ್ಯುಎಫ್‌ ಸೂಪರ್‌– 1000 ಟೂರ್ನಿಯ ಮಹಿಳೆಯ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಗ್ರೆಗರಿಯಾ ಮರಿಸ್ಕಾ ತನ್‌ಜುಂಗ್‌ ಅವರನ್ನು ಮಣಿಸಿದರು. ಕಳೆದ ಎರಡು ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಭಾರತದ ಆಟಗಾರ್ತಿ 38 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗ್ರೆಗರಿಯಾ ಅವರನ್ನು 21–19, 21–15ರಲ್ಲಿ ಸೋಲಿಸಿ, ಪ್ರೀ ಕ್ವಾಟರ್‌ಫೈನಲ್‌ ಪ್ರವೇಶ ಖಚಿತಪಡಿಸಿದರು. ಗ್ರೆಗರಿಯಾ ಮತ್ತು ಸಿಂಧು ಈ ವರ್ಷ ಮೂರನೇ ಬಾರಿ ಮುಖಾಮುಖಿಯಾಗಿದ್ದು, ‌ಇದೇ ಮೊದಲ ಬಾರಿ ಭಾರತದ ಆಟಗಾರ್ತಿ ಜಯಗಳಿಸಿದ್ದಾರೆ. ಮ್ಯಾಡ್ರಿಡ್‌ ಮಾಸ್ಟರ್ಸ್‌ ಟೂರ್ನಿಯ ಫೈನಲ್‌ನಲ್ಲಿ ಮತ್ತು ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಗ್ರೆಗರಿಯಾ ಗೆಲುವು ಸಾಧಿಸಿದ್ದರು. ಮೊದಲ ಗೇಮ್‌ನಲ್ಲಿ ಗ್ರೆಗರಿಯಾ ಅವರಿಂದ ಸಿಂಧು ತೀವ್ರ ಪೈಪೋಟಿ ಎದುರಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಸಿಂಧು ಆರಂಭದಲ್ಲೇ ನಿಯಂತ್ರಣ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ತೈವಾನ್‌ನ ತಾಯ್ ಜು ಯಿಂಗ್‌ ಅವರ ಸವಾಲನ್ನು ಎದುರಿಸುವರು. ಪ್ರಣಯ್‌ಗೆ ಗೆಲುವು: ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಕೂಡ ಶುಭಾರಂಭ ಮಾಡಿದ್ದು, ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಅವನ್ನು ಮಣಿಸಿದರು. 50 ನಿಮಿಷ ನಡೆದ ಪಂದ್ಯದಲ್ಲಿ 21–16, 21–14ರಲ್ಲಿ ಗೆಲುವು ಸಾಧಿಸಿದರು. ಭಾರತದ ಆಟಗಾರ ಮುಂದಿನ ಸುತ್ತಿನಲ್ಲಿ ಹಾಂಗ್‌ಕಾಂಗ್‌ನ ಆಂಗಸ್‌ ಲಾಂಗ್‌ ಅವರನ್ನು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿಯು, ಎದುರಾಳಿಗಳಾದ ಮಾರ್ಕಸ್‌ ಫೆರ್ನಾಲ್ಡಿ ಗಿಡಿಯೊನ್‌ ಮತ್ತು ಕೆವಿನ್‌ ಸುಕಮುಲ್ಜೊ (ಇಂಡೊನೇಷ್ಯಾ) ಅವರು ಗಾಯಾಳಾಗಿ ಅರ್ಧದಲ್ಲೇ ಹಿಂದೆ ಸರಿದ ಕಾರಣ ಮುಂದಿನ ಸುತ್ತು ಪ್ರವೇಶಿಸಿದರು. ಈ ವೇಳೆ ಭಾರತದ ಜೋಡಿ 21–12, 11–7ರಿಂದ ಮುಂದಿತ್ತು. ಸೋಲು: ಎಂ.ಆರ್‌.ಅರ್ಜುನ್‌– ಧ್ರುವ್‌ ಕಪಿಲಾ ಜೋಡಿ 21–12, 6–21, 20–22ರಲ್ಲಿ ಮಲೇಷ್ಯಾದ ಇ.ವೈ.ಟಿಯೊ– ವೈ.ಎಸ್.ಒಂಗ್‌ ಜೋಡಿ ಎದುರು ಸೋಲನುಭವಿಸಿತು. ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಶಾ ಜೋಳಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿತು. ಜಪಾನ್‌ನ ರಿನ್ ಇವಾನಾಗ ಮತ್ತು ಕೀ ನಕನಿಶಿ ಜೋಡಿಯ ಎದುರು 22–20, 12–21, 16–21ರಲ್ಲಿ ಸೋಲೊಪ್ಪಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.