ಹಾಕಿ: ಹಿರಿಯ ಆಟಗಾರ್ತಿಯರ ಸ್ಥಾನ ಭದ್ರ ಅಲ್ಲ– ಕೋಚ್ ಯಾನೆಕ್ ಬೆಂಗಳೂರು: ಜೂನಿಯರ್‌ ಏಷ್ಯಾ ಕಪ್‌ ಹಾಕಿ ಟೂರ್ನಿ ಗೆದ್ದ ಭಾರತ ತಂಡದಲ್ಲಿರುವ ಕೆಲವು ಆಟಗಾರ್ತಿಯರು ಮುಂಬರುವ ಏಷ್ಯನ್‌ ಕ್ರೀಡಾಕೂಟಕ್ಕೆ ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿಯಲ್ಲಿದ್ದಾರೆ ಎಂದು ಮುಖ್ಯ ಕೋಚ್‌ ಯಾನೆಕ್ ಶೋಪ್‌ಮನ್‌ ಹೇಳಿದ್ದಾರೆ. ‘ಏಷ್ಯನ್‌ ಕ್ರೀಡಾಕೂಟದ ಹಾಕಿ ತಂಡದಲ್ಲಿ ತಮ್ಮ ಸ್ಥಾನ ಭದ್ರ ಎಂಬುದಾಗಿ ಭಾವಿಸಬೇಕಿಲ್ಲ’ ಎಂದು ಅವರು ಸೀನಿಯರ್‌ ತಂಡದ ಆಟಗಾರ್ತಿಯರನ್ನು ಎಚ್ಚರಿಸಿದ್ದಾರೆ. ‘ನಮ್ಮ ಸೀನಿಯರ್‌ ತಂಡ ಬಲಿಷ್ಠವಾಗಿರುವುದು ನಿಜ. ಆದರೆ ಏಷ್ಯನ್ ಕ್ರೀಡಾಕೂಟಕ್ಕೆ ತಂಡದ ಆಯ್ಕೆಯ ವೇಳೆ ಜೂನಿಯರ್‌ ತಂಡದ ಆಟಗಾರ್ತಿಯರನ್ನೂ ಪರಿಗಣಿಸಲಾಗುವುದು. ಜೂನಿಯರ್‌ ಆಟಗಾರ್ತಿಯರ ವಯಸ್ಸು ಅವರ ಆಯ್ಕೆಗೆ ಅಡ್ಡಿಯಾಗದು’ ಎಂದು ಮಂಗಳವಾರ ನಡೆದ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಪಾನ್‌ನ ಕಕಾಮಿಗಹಾರದಲ್ಲಿ ನಡೆದಿದ್ದ ಜೂನಿಯರ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಭಾರತ ತಂಡದ ಆಟಗಾರ್ತಿಯರು ಮಂಗಳವಾರ ಬೆಂಗಳೂರಿಗೆ ಬಂದಿಳಿದಾಗ ಅದ್ದೂರಿ ಸ್ವಾಗತ ನೀಡಲಾಯಿತು. ಭಾನುವಾರ ನಡೆದಿದ್ದ ಫೈನಲ್‌ನಲ್ಲಿ ಭಾರತ ತಂಡ 2–1 ರಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ಕೊರಿಯಾ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿ ಎತ್ತಿಹಿಡಿದಿತ್ತು. ಮುಖ್ಯ ಕೋಚ್ ಯಾನೆಕ್‌, ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಏಷ್ಯನ್‌ ಕ್ರೀಡಾಕೂಟಕ್ಕೆ ಮಹಿಳಾ ಹಾಕಿ ತಂಡದ ಆಯ್ಕೆಗೆ ಜುಲೈ 15ರ ವರೆಗೆ ಕಾಲಾವಕಾಶ ಇದೆಯಾದರೂ, ಈ ತಿಂಗಳ ಒಳಗಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಯಾನೆಕ್‌ ನುಡಿದರು. ಏಷ್ಯನ್‌ ಕ್ರೀಡಾಕೂಟ ಚೀನಾದ ಹಾಂಗ್‌ಜೌನಲ್ಲಿ ಇದೇ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿದೆ. ‘ನಾವು ಪ್ರಮುಖ ಟೂರ್ನಿಗಳಿಗೆ ತಂಡವನ್ನು ಬೇಗನೇ ಪ್ರಕಟಿಸುತ್ತೇವೆ. ಈ ತಿಂಗಳಲ್ಲಿ ಆಯ್ಕೆ ಟ್ರಯಲ್ಸ್‌ ಇದ್ದು, ಆಟಗಾರ್ತಿಯರು ಅಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ’ ಎಂದರು. ‘ಏಷ್ಯನ್‌ ಕ್ರೀಡಾಕೂಟದ ತಂಡದ ಆಯ್ಕೆಗೆ ಆಟಗಾರ್ತಿಯರ ವಯಸ್ಸು ನಿರ್ಣಾಯಕ ಅಂಶ ಅಲ್ಲ. ಜೂನಿಯರ್‌ ಏಷ್ಯಾ ಕಪ್‌ ನಾವು ಗೆದ್ದಿದ್ದೇವೆ ಎಂದರೆ, ಆಟಗಾರ್ತಿಯರು ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ ಎಂದರ್ಥ. ಆದ್ದರಿಂದ ಅವರ ಪ್ರದರ್ಶನವನ್ನು ಖಂಡಿತವಾಗಿಯೂ ಪರಿಗಣಿಸುತ್ತೇವೆ’ ಎಂದಿದ್ದಾರೆ. ‘ಜೂನಿಯರ್‌ ಏಷ್ಯಾ ಕಪ್‌ ಗೆದ್ದ ತಂಡದಲ್ಲಿದ್ದ ಐವರು ಆಟಗಾರ್ತಿಯರು ಈಗಾಗಲೇ ಸೀನಿಯರ್‌ ತಂಡದಲ್ಲಿ ಆಡಿದ್ದಾರೆ. ತಂಡದ ಆಯ್ಕೆಯ ವೇಳೆ ಅವರನ್ನೂ ಪರಿಗಣಿಸಲಾಗುವುದು. ಆದರೆ ಆಯ್ಕೆಯ ಮಾನದಂಡದಲ್ಲಿ ಯಾವುದೇ ಬದಲಾವಣೆಯಿಲ್ಲ– ಟ್ರಯಲ್ಸ್‌ನಲ್ಲಿ ನೀಡುವ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು’ ಎಂದು ನುಡಿದರು. ‘ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಸೀನಿಯರ್‌ ತಂಡದಲ್ಲಿ ಐವರು ಜೂನಿಯರ್‌ ಆಟಗಾರ್ತಿಯರಿಗೆ ಅವಕಾಶ ನೀಡಿದ್ದೆವು. ಅಲ್ಲಿ ಪಡೆದ ಅನುಭವವು ಅವರಿಗೆ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಯಿತು’ ಎಂದು ಅಭಿಪ್ರಾಯಪಟ್ಟರು. - - ‘ಶ್ರೇಯ ಯಾನೆಕ್‌ಗೆ ಸಲ್ಲಬೇಕು’ ‘ಈ ಗೆಲುವಿನ ಶ್ರೇಯ ಕೋಚ್‌ ಯಾನೆಕ್‌ ಶೋಪ್‌ಮನ್‌ಗೆ ಸಲ್ಲಬೇಕು. ಅವರ ಸೂಕ್ತ ಮಾರ್ಗದರ್ಶನ ಇಲ್ಲದಿರುತ್ತಿದ್ದಲ್ಲಿ ನಮಗೆ ಚಿನ್ನ ಗೆಲ್ಲಲು ಆಗುತ್ತಿರಲಿಲ್ಲ. ನಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಅವರು ಎಲ್ಲ ರೀತಿಯ ಬೆಂಬಲ ನೀಡಿದರು’ ತಂಡದ ಫಾರ್ವರ್ಡ್‌ ಆಟಗಾರ್ತಿ ಮುಮ್ತಾಜ್‌ ಖಾನ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.