ಮಣಿಂದರ್‌ ಸಿಂಗ್ ಭರ್ಜರಿ ಆಟ ಪುಣೆ: ನಾಯಕ ಮಣಿಂದರ್ ಸಿಂಗ್ ಗಳಿಸಿದ ಅಮೋಘ 20 ಪಾಯಿಂಟ್ಸ್ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜಯ ಗಳಿಸಿತು. ಇಲ್ಲಿಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಾಲ್ 45–40ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಪರಾಭವಗೊಳಿಸಿತು. ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಗುಜರಾತ್ ತಂಡ ಒಂಬತ್ತನೇ ನಿಮಿಷದಲ್ಲಿ 10–8ರಿಂದ ಮುನ್ನಡೆ ಸಾಧಿಸಿತು. 12ನೇ ನಿಮಿಷದಲ್ಲಿ ಎದುರಾಳಿಯನ್ನು ಆಲೌಟ್ ಮಾಡಿದ ಬೆಂಗಾಲ್ 14–12ರ ಮೇಲುಗೈ ಸಾಧಿಸಿತು. ಬಳಿಕ ಸೂಪರ್ ರೇಡ್ ಮಾಡಿದ ಮಣಿಂದರ್ ತಂಡದ ಮುನ್ನಡೆಯನ್ನು 21–14ಕ್ಕೆ ಕೊಂಡೊಯ್ದರು. ಬಳಿಕ ಮತ್ತೊಂದು ಬಾರಿ ಗುಜರಾತ್ಅನ್ನು ಆಲೌಟ್ ಮಾಡಿದ ಬೆಂಗಾಲ್ ಮುನ್ನಡೆ ಮತ್ತಷ್ಟು ಹೆಚ್ಚಿತು. ಮೊದಲಾರ್ಧದ ವೇಳೆಗೆ ಮಣಿಂದರ್ ಬಳಗ 32–18ರಿಂದ ಮುಂದಿತ್ತು. ದ್ವಿತೀಯಾರ್ಧದಲ್ಲಿ ಗುಜರಾತ್ ತಿರುಗೇಟು ನೀಡುವ ಸೂಚನೆ ನೀಡಿತು. 28ನೇ ನಿಮಿಷದಲ್ಲಿ ಆ ತಂಡವು ಎದುರಾಳಿಯನ್ನು ಆಲೌಟ್‌ ಮಾಡಿತು. ಆದರೂ ಬೆಂಗಾಲ್‌ 37–31ರ ಮುನ್ನಡೆ ಕಾಯ್ದುಕೊಂಡಿತು. ಇದಾದ ಬಳಿಕ ಮತ್ತೊಂದು ಬಾರಿ ಗುಜರಾತ್ ತಂಡವು ಬೆಂಗಾಲ್‌ ಆಟಗಾರರನ್ನು ಮತ್ತೊಮ್ಮೆ ಆಲೌಟ್ ಮಾಡಿ 36–38ರಿಂದ ಹಿನ್ನಡೆ ತಗ್ಗಿಸಿಕೊಂಡಿತು. ಆದರೆ ಕೊನೆಯ ಹಂತದ ಒತ್ತಡ ಮೀರಿ ನಿಂತ ಗುಜರಾತ್ ಗೆಲುವು ಒಲಿಸಿಕೊಂಡಿತು. ಈ ಗೆಲುವಿನೊಂದಿಗೆ ಬೆಂಗಾಲ್‌ ವಾರಿಯರ್ಸ್‌ ತಂಡವು 29 ಪಾಯಿಂಟ್ಸ್‌ ಗಳಿಸಿ ಆರನೇ ಸ್ಥಾನಕ್ಕೇರಿತು. ಪುಣೇರಿ ಪಲ್ಟನ್‌ ಮೊದಲ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವು 39–31ರಿಂದ ತೆಲುಗು ಟೈಟನ್ಸ್ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡಕ್ಕಾಗಿ ರೇಡರ್‌ ಅಜಿಂಕ್ಯ ಪವಾರ್ 12 ಪಾಯಿಂಟ್ಸ್ ಕಲೆಹಾಕಿದರು. ಡಿಫೆಂಡರ್‌ ಸಾಗರ್ (8) ಮತ್ತು ಹಿಮಾಂಶು ಸಿಂಗ್ (7) ಕೂಡ ಕಾಣಿಕೆ ನೀಡಿದರು. ತೆಲುಗು ಟೈಟನ್ಸ್ ಪರ ಸಿದ್ಧಾರ್ಥ್ ದೇಸಾಯಿ ಗಳಿಸಿದ 14 ಪಾಯಿಂಟ್ಸ್ ವ್ಯರ್ಥವಾದವು. ಮೊಹಸಿನ್‌ 5 ಪಾಯಿಂಟ್ಸ್ ಕಲೆಹಾಕಿದರು. ಇಂದಿನ ಪಂದ್ಯಗಳು ಬೆಂಗಳೂರು ಬುಲ್ಸ್ –ಗುಜರಾತ್ ಜೈಂಟ್ಸ್‌ ಪುಣೇರಿ ಪಲ್ಟನ್‌– ತಮಿಳ್ ತಲೈವಾಸ್‌ ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.