ಪಾಂಡಂಡ ಕುಟ್ಟಪ್ಪ ಸ್ಮಾರಕ ಹಾಕಿ ಟೂರ್ನಿ- ಸೆಮಿಫೈನಲ್‌ಗೆ ನೆಲ್ಲಮಕ್ಕಡ, ಪರದಂಡ ತಂಡ ಗೋಣಿಕೊಪ್ಪಲು: ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ 10 ದಿನಗಳಿಂದ ನಡೆಯುತ್ತಿರುವ ಪಾಂಡಂಡ ಕುಟ್ಟಪ್ಪ ಸ್ಮಾರಕ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಶನಿವಾರ ನೆಲ್ಲಮಕ್ಕಡ ತಂಡ 8-0 ಗೋಲುಗಳಿಂದ ಕಲಿಯಂಡ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ನೆಲ್ಲಮಕ್ಕಡ ತಂಡದ ಪೂವಣ್ಣ 3, ಸಚಿನ್ 1 ಗೋಲು ಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಸೌಧ ಕಟ್ಟಿದರು. ಬಳಿಕ ಸೋಮಯ್ಯ 2, ಅಯ್ಯಪ್ಪ 1, ಚೆಂಗಪ್ಪ 1 ಗೋಲು ಗಳಿಸುವ ಮೂಲಕ ಗೆಲುವಿನ ಅಂತರ ಹೆಚ್ಚಿಸಿದರು. ತೀವ್ರ ಪೈಪೋಟಿ ನಡೆಸಿದ ಕಲಿಯಂಡ ತಂಡ ನೆಲ್ಲಮಕ್ಕಡ ತಂಡದ ಎದುರು ಯಾವುದೇ ಗೋಲು ಗಳಿಸಲಾಗದೆ ತೀವ್ರ ಮುಖಭಂಗ ಅನುಭವಿಸಿತು. 2ನೇ ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ ತಂಡ ಮಂಡೇಪಂಡ ತಂಡವನ್ನು 9-8 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶ ಪಡೆಯಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಇನ್ನಿಲ್ಲದ ಪೈಪೋಟಿ ನಡೆಸಿದವು. ಅಂತಿಮವಾಗಿ ಪರದಂಡ ತಂಡದ ಪ್ರಸಾದ್ 2, ಅಯ್ಯಪ್ಪ 2, ಕೀರ್ತಿ 2, ಪ್ರಜ್ವಲ್ 2, ಚಶ್ವಿನ್ 1 ಗೋಲು ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮಂಡೇಪಂಡ ತಂಡದ ಮೊಣ್ಣಯ್ಯ 2, ಗೌತಮ್ 3, ಸಜನ್ 2, ಕ್ರಿಪನ್ 1 ಗೋಲು ಗಳಿಸಿದರಾದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಕಾರ್ಟರ್ ಫೈನಲ್ ಪೂರ್ವ ಪಂದ್ಯದಲ್ಲಿ ಚೇಂದಂಡ, ಚೆಪ್ಪುಡೀರ ತಂಡವನ್ನು 3-1 ಗೋಲುಗಳಿಂದ ಪರಾಭವಗೊಳಿಸಿತು. ಚೇಂದಂಡ ತಂಡದ ಉತ್ತಪ್ಪ 3, ಗೋಲು ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಚೆಪ್ಪಡೀರ ತಂಡದ ಚಿಣ್ಣಪ್ಪ ಏಕೈಕ ಗೋಲು ಗಳಿಸಿದರು. ಚೇನಂಡ ತಂಡ, ಮಾರ್ಚಂಡ ತಂಡದ ಎದುರು 3-2 ಗೋಲುಗಳಿಂದ ಜಯಗಳಿಸಿತು. ಚೇನಂಡ ತಂಡದ ಮಂದಣ್ಣ 1, ಸೋಮಯ್ಯ 2 ಗೋಲು ಗಳಿಸಿದರು. ಮಾರ್ಚಂಡ ತಂಡದ ಸುಬ್ರಮಣಿ 1, ನಾಚಪ್ಪ 1 ಗೋಲು ಗಳಿಸಿದರು. ತೀವ್ರ ಹಣಾಹಣಿಯಿಂದ ಕೂಡಿದ ಮತ್ತೊಂದು ಪಂದ್ಯದಲ್ಲಿ ಕುಪ್ಪಂಡ ತಂಡ, ಚೆಕ್ಕೇರ ತಂಡವನ್ನು 8-6 ಗೋಲು ಗಳಿಂದ ಮಣಿಸಿತು. ಕುಪ್ಪಂಡ ತಂಡದ ಸೋಮಯ್ಯ ಚಾಣಾಕ್ಷತನದಿಂದ ಆಡಿ 6 ಗೋಲು ಗಳಿಸಿ ಹಾಕಿ ಪ್ರಿಯರ ಗಮನ ಸೆಳೆದರು. ನಾಚಪ್ಪ 1, ಪ್ರದಾನ್ 1 ಗೋಲು ಗಳಿಸಿದರು. ಚೆಕ್ಕೇರ ತಂಡದ ಆದರ್ಶ 3, ಆಕಾಶ್ 2, ಸೋಮಯ್ಯ 1 ಗೋಲು ಗಳಿಸಿದರಾದರು ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಚೆಪ್ಪುಡೀರ ತಂಡ 4-2 ಗೋಲೂಗಳಿಂದ ಕುಲ್ಲೇಟೀರ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಚೆಪ್ಪುಡೀರ ತಂಡದ ಸೋಮಣ್ಣ 2, ಕಾರ್ಯಪ್ಪ 1, ಚಿಣ್ಣಪ್ಪ 1 ಗೋಲು ಗಳಿಸಿದರು, ಕುಲ್ಲೇಟೀರ ತಂಡದ ನಾಚಪ್ಪ. 1, ಶುಭಮ್ ಗೋಲು ಗಳಿಸಿದರು. ಕಡೇಮಾಡ ತಂಡ ಇಟ್ಟೀರ ತಂಡವನ್ನು 5-4 ಗೋಲುಗಳಿಂದ ಪರಾಭವಗೊಳಿಸಿತು. ಕಡೇಮಾಡ ತಂಡದ ಚರ್ಮಣ 4, ಕಾವೇರಪ್ಪ 1 ಗೋಲು ಗಳಿಸಿ ತಂಡಕ್ಕೆ ನೆರವಾದರು. ಇಟ್ಟೀರ ತಂಡದ ಕಿರಣ್ 1, ಕುಟ್ಟಪ್ಪ 1 ಅಚ್ಚಯ್ಯ 2 ಗೋಲುಗಳಿಸಿ ತೀವ್ರ ಪೈಪೋಟಿ ಒಡ್ಡಿದರು. ಸೋಮೆಯಂಡ ತಂಡ ಕೋಟೆರ ತಂಡದ ವಿರುದ್ಧ 6-3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಸೋಮೆಯಂಡ ತಂಡದ ಅಪ್ಪಯ್ಯ 2, ಅಪ್ಪಚ್ಚು 4 ಗೋಲು ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಕೋಟೇರ ತಂಡ ಭರತ್ 1, ಕೌಶಿಕ್ 2 ಗೋಲು ಹೊಡೆದರು. ಉಳಿದ ಪಂದ್ಯಗಳಲ್ಲಿ ಮಾರ್ಚಂಡ ತಂಡ ಮೇಕೇರಿರ ತಂಡವನ್ನು 4-2 ಗೋಲುಗಳಿಂದ, ಪೊರುಕೊಂಡ ತಂಡ 4-3 ಗೋಲುಗಳಿಂದ ಪಾಂಡಂಡ ತಂಡವನ್ನು, ಇಟ್ಟೀರ ತಂಡ ಪೊನ್ನೋಳತಂಡ ತಂಡವನ್ನು 9-2 ಗೋಲುಗಳಿಂದ ಮಣಿಸಿದವು. ಭಾನುವಾರ ಮತ್ತೆರಡು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದು ಬಳಿಕ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಹೀಗಾಗಿ, ಭಾನುವಾರದ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.