ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಲವ್ಲಿನಾ ನವದೆಹಲಿ: ಭಾರತದ ಲವ್ಲಿನಾ ಬೊರ್ಗೊಹೈನ್‌ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದು ಪದಕ ಖಚಿತಪಡಿಸಿದ್ದಾರೆ. ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಲವ್ಲಿನಾ ಎಂಟರಘಟ್ಟದ ಬೌಟ್‌ನಲ್ಲಿ 3–2ರಿಂದ ಕಜಕಸ್ತಾನದ ವ್ಯಾಲೆಂಟೀನ್‌ ಕಜಲೊವಾ ಸವಾಲು ಮೀರಿದರು. ಹೋದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿಲವ್ಲಿನಾ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಅಂಕುಷಿತಾ ಬೋರೊ (66 ಕೆಜಿ) ಅವರೂ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕರ ಘಟ್ಟ ತಲುಪಿದರು. ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಅವರು 5–0ಯಿಂದ ಜಪಾನ್‌ನ ಸುಬತಾ ಆರ್ಸಿಯಾ ಅವರನ್ನು ಪರಾಭವಗೊಳಿಸಿದರು. 70 ಕೆಜಿ ವಿಭಾಗದ ಎಂಟರಘಟ್ಟದಲ್ಲಿ ಪೂಜಾ 0–5ರಿಂದ ಕಜಕಸ್ತಾನದ ದರಿಗಾ ಶಕಿಮೊವಾ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.