ಹೈಲೊ ಓಪನ್ ಬ್ಯಾಡ್ಮಿಂಟನ್‌: ಭಾರತದ ಸವಾಲು ಅಂತ್ಯ ಸಾರ್‌ಬ್ರೂಕನ್‌, ಜರ್ಮನಿ: ಭಾರತದ ಕಿದಂಬಿ ಶ್ರೀಕಾಂತ್‌, ಗಾಯತ್ರಿ ಗೋಪಿಚಂದ್‌– ತ್ರಿಶಾ ಜೋಲಿ ಅವರು ಇಲ್ಲಿ ನಡೆಯುತ್ತಿರುವ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ದೇಶದ ಆಟಗಾರರ ಸವಾಲು ಅಂತ್ಯವಾಗಿದೆ. ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್‌18-21, 15-21ರಿಂದ ಇಂಡೊನೇಷ್ಯಾದ ಆ್ಯಂಟನಿ ಗಿಂಟಿಂಗ್ ಅವರಿಂದ ಪರಾಭವಗೊಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಗಿಂಟಿಂಗ್‌ 38 ನಿಮಿಷಗಳಲ್ಲಿ 2021ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಶ್ರೀಕಾಂತ್‌ಗೆ ಸೋಲುಣಿಸಿದರು. ಇದಕ್ಕೂ ಮೊದಲು ಮಹಿಳಾ ಡಬಲ್ಸ್‌ನಲ್ಲಿ ತ್ರಿಶಾ– ಗಾಯತ್ರಿ21-17, 14-21 18-21ರಿಂದ ಥಾಯ್ಲೆಂಡ್‌ ಸಹೋದರಿಯರಾದ ಬೆನ್ಯಾಪಾ ಐಮ್‌ಸಾರ್ದ್‌ ಮತ್ತು ನೂಂತ್‌ಕರ್ನ್‌ ಐಮ್‌ಸಾರ್ದ್‌ ಅವರಿಗೆ ಮಣಿದರು. ಜಿದ್ದಾಜಿದ್ದಿನ ಈ ಪೈಪೋಟಿಯು ಒಂದು ತಾಸಿಗಿಂತ ಹೆಚ್ಚು ಸಮಯ ನಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.