ಮಂಗಳೂರು ಮ್ಯಾರಥಾನ್: ಸಚಿನ್, ದೀಪಾಗೆ ಪ್ರಶಸ್ತಿ ಮಂಗಳೂರು: ಉಡುಪಿಯ ಸಚಿನ್ ಮತ್ತು ಬೆಂಗಳೂರಿನ ದೀಪಾ ನಾಯಕ್ ಅವರು ಮಂಗಳೂರು ರನ್ನರ್ಸ್ ಕ್ಲಬ್ ಮಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಹಾಫ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ನಗರದ ಮಂಗಳಾ ಕ್ರೀಡಾಂಗಣದಿಂದ ಆರಂಭಗೊಂಡು ತಣ್ಣೀರುಬಾವಿ ಹಾಗೂ ಅಲ್ಲಿಂದ ತಿರುವು ಪಡೆದು ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಂಡ ಓಟದಲ್ಲಿ ಸಚಿನ್ 1 ತಾಸು 14.12 ನಿಮಿಷಗಳಲ್ಲಿ ಗುರಿ ಮುಟ್ಟಿದರು. 1 ತಾಸು 15.48 ನಿಮಿಷಗಳಲ್ಲಿ ಗುರಿ ಸೇರಿದ ಬೆಂಗಳೂರಿನ ರಾಹುಲ್ ಶುಕ್ಲಾ ಎರಡನೇ ಸ್ಥಾನ ಗಳಿಸಿದರು. ಮಂಗಳೂರಿನ ವೆಂಕಟೇಶ (1:16.29) ಮೂರನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದ ಚಾಂಪಿಯನ್ ದೀಪಾ 1 ತಾಸು 44.55 ನಿಮಿಷಗಳಲ್ಲಿ ಗುರಿ ಮುಟ್ಟಿದರು. ಮಂಗಳೂರಿನ ಮೆಹವಿಷ್ ಹುಸೇನ್ 2 ತಾಸು 5.56 ನಿಮಿಷಗಳಲ್ಲಿ ಓಟ ಮುಗಿಸಿ ದ್ವಿತೀಯ ಸ್ಥಾನ ಗಳಿಸಿದರು. ಬೆಂಗಳೂರಿನ ಸಂಧ್ಯಾ ಕೆ (2:07.31) ಮೂರನೇ ಸ್ಥಾನ ಗಳಿಸಿದರು. ಟೆನ್ ಕೆ ಓಟದ ಪುರುಷರ ವಿಭಾಗದಲ್ಲಿ ಹಾಸನದ ಸಿಬಿನ್ ಚೆಂಗಪ್ಪ (35.04 ನಿಮಿಷ), ಶಿವಮೊಗ್ಗದ ದಶರಥ್ (36.12 ನಿ) ಮತ್ತು ಮಂಡ್ಯದ ಲಾರಾ ಫ್ರಾನ್ಸಿಸ್ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಪಂದನಾ (48.23 ನಿ), ಧನುಷಾ ಮತ್ತು ಚೈತ್ರಾ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು. ಹಾಫ್ ಮ್ಯಾರಥಾನ್‌ನ ಎರಡೂ ವಿಭಾಗಗಳ ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹ 10 ಸಾವಿರ, ₹ 7 ಸಾವಿರ ಮತ್ತು ₹ 5 ಸಾವಿರ, ಟೆನ್‌ ಕೆ ಓಟದ ಎರಡೂ ವಿಭಾಗಗಳಲ್ಲಿ ಕ್ರಮವಾಗಿ ₹ 5 ಸಾವಿರ, ₹ 3.5 ಸಾವಿರ ಮತ್ತು ₹ 3 ಸಾವಿರ ನಗದು ಬಹುಮಾನ ನೀಡಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.