ಪ್ರೊ ಕಬಡ್ಡಿ ಲೀಗ್‌ | ಜೈಂಟ್ಸ್‌ಗೆ ಮಣಿದ ಬುಲ್ಸ್‌ ಪುಣೆ: ವೀರೋಚಿತ ಹೋರಾಟ ನಡೆಸಿದ ಬೆಂಗಳೂರು ಬುಲ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ ಕೈಯಲ್ಲಿ ಪರಾಭವಗೊಂಡರು. ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಜೈಂಟ್ಸ್‌ 46–44 ರಲ್ಲಿ ಬುಲ್ಸ್‌ ತಂಡವನ್ನು ಮಣಿಸಿತು. 16 ಪಾಯಿಂಟ್ಸ್‌ ಗಳಿಸಿದ ಪ್ರತೀಕ್ ದಹಿಯಾ ಅವರು ಜೈಂಟ್ಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪ್ರತೀಕ್‌ಗೆ ತಕ್ಕ ಬೆಂಬಲ ನೀಡಿದ ರಾಕೇಶ್‌ 10 ಪಾಯಿಂಟ್ಸ್‌ ತಂದಿತ್ತರು. ವಿರಾಮದ ವೇಳೆಗೆ 16–21 ರಲ್ಲಿ ಹಿನ್ನಡೆಯಲ್ಲಿದ್ದ ಬುಲ್ಸ್‌, ದ್ವಿತೀಯಾರ್ಧದಲ್ಲಿ ಮರುಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ. 14 ಪಾಯಿಂಟ್ಸ್‌ ಕಲೆಹಾಕಿದ ಬುಲ್ಸ್‌ ತಂಡದ ಭರತ್‌ ಸೋಲಿನ ನಡುವೆಯೂ ಮಿಂಚಿದರು. ವಿಕಾಸ್‌ ಖಂಡೋಲ 9 ಹಾಗೂ ನೀರಜ್‌ ನರ್ವಾಲ್‌ 8 ಪಾಯಿಂಟ್ಸ್‌ ತಂದಿತ್ತರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಜೈಂಟ್ಸ್‌ ಮೊದಲ ಏಳು ನಿಮಿಷಗಳಲ್ಲಿ 5–2 ರಲ್ಲಿ ಮುನ್ನಡೆ ಪಡೆಯಿತು. ಆ ಬಳಿಕ ಪ್ರತೀಕ್‌ ಮಿಂಚಿನ ರೇಡಿಂಗ್‌ನಲ್ಲಿ ಬುಲ್ಸ್‌ ತಂಡವನ್ನು ಅಲೌಟ್‌ ಮಾಡಿ ಮುನ್ನಡೆಯನ್ನು 12–5ಕ್ಕೆ ಹೆಚ್ಚಿಸಿದರು. ಭರತ್ ಅವರ ಉತ್ತಮ ಆಟದಿಂದ ಎರಡನೇ ಅವಧಿಯ ಆರಂಭದಲ್ಲಿ ಬುಲ್ಸ್‌ 24–24 ರಲ್ಲಿ ಸಮಬಲ ಸಾಧಿಸಿತ್ತು. ಅನಂತರ ಮತ್ತೊಮ್ಮೆ ಎದುರಾಳಿ ತಂಡವನ್ನು ಆಲೌಟ್‌ ಮಾಡಿ 34–29 ರಲ್ಲಿ ಮೇಲುಗೈ ಪಡೆದಿತ್ತು. ಆದರೆ ಕೊನೆಯ ಕೆಲವು ನಿಮಿಷಗಳಲ್ಲಿ ಪ್ರತೀಕ್‌ ಅವರು ಪಾಯಿಂಟ್ಸ್‌ ಕಲೆಹಾಕಿ ಜೈಂಟ್ಸ್‌ಗೆ ಗೆಲುವು ತಂದಿತ್ತರು. ದಿನದ ಎರಡನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ 35–34 ರಲ್ಲಿ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿತು. ಜಿದ್ದಾಜಿದ್ದಿನ ಹೋರಾಟ ನಡೆದ ಪಂದ್ಯದ ಪ್ರಥಮಾರ್ಧ ಕೊನೆಗೊಂಡಾಗ ತಲೈವಾಸ್‌ 16–15 ರಲ್ಲಿ ಮುನ್ನಡೆ ಪಡೆದಿತ್ತು. ವಿಜಯಿ ತಂಡದ ನರೇಂದರ್‌ 13 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ಸೋಲು ಅನುಭವಿಸಿದರೂ ಪಲ್ಟನ್‌ ತಂಡ 38 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಬುಲ್ಸ್‌ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯಗಳು ಯು ಮುಂಬಾ– ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪಟ್ನಾ ಪೈರೇಟ್ಸ್‌– ಹರಿಯಾಣ ಸ್ಟೀಲರ್ಸ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.