ಹಾಕಿ: ಕಾಡ್ಯಮಾಡ, ಮಾಚಿಮಾಡ ಸೇರಿದಂತೆ 9 ತಂಡಗಳ ಮುನ್ನಡೆ ಗೋಣಿಕೊಪ್ಪಲು: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪಾಡಂಡ ಸ್ಮಾರಕ ಹಾಕಿ ಟೂರ್ನಿಯ ಬುಧವಾರ ಪಂದ್ಯದಲ್ಲಿ ಕಾಡ್ಯಮಾಡ, ಮಾಚಿಮಾಡ, ಚೇನಂಡ, ಚೆಕ್ಕೇರ, ದೇಯಂಡ, ಚೇಂದಂಡ, ಐಯಂಡ, ಮುಕ್ಕಾಟೀರ, ಶಾಂತೆಯಂಡ ತಂಡಗಳು ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದವು. ದೇಯಂಡ ತಂಡ ಉದಿಯಂಡ ತಂಡದ ವಿರುದ್ಧ 7-5 ಗೋಲುಗಳಿಂದ ಜಯ ಗಳಿಸಿತು. ದೇಯಂಡ ತಂಡದ 14 ವರ್ಷದ ಬಾಲಕ ವಶಿಕ್ 2 ಗೋಲು ಗಳಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಬಳಿಕ ಸಂಜು 2, ದೀರಜ್ 3 ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು. ವಶಿಕ್ ಪಾಂಡಂಡ ಹಾಕಿ ಟೂರ್ನಿಯಲ್ಲಿ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರನಾಗಿದ್ದು, ಆತ ಗಳಿಸಿದ ಚಾಣಾಕ್ಷತನದ ಗೋಲಿನ ಮೂಲಕ ಎಲ್ಲರ ಮೆಚ್ಚುಗೆ ಪಾತ್ರವಾದರು. ಇದಕ್ಕಾಗಿ ಕ್ರೀಡಾ ಪ್ರೇಮಿಗಳು ಹಾಗೂ ಟೂರ್ನಿ ಆಯೋಜಕರು ಆತನಿಗೆ ವಿಶೇಷ ಬಹುಮಾನ ನೀಡುವ ಮೂಲಕ ಆತನ ಆಟವನ್ನು ಕೊಂಡಾಡಿದರು. ಉದಿಯಂಡ ತಂಡದ ದೇವಯ್ಯ 2 ದ್ಯಾನ್ ಮತ್ತು ಪವನ್ ತಲಾ ಒಂದು ಗೋಲು ಗಳಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಮುಕ್ಕಾಟೀರ ತಂಡ ಪುದಿಯೊಕ್ಕಡ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಮುಕ್ಕಾಟೀರ ತಂಡದ ನಾಣಯ್ಯ 1, ಯುವ ಆಟಗಾರ್ತಿ ಕಾವ್ಯ 2 ಗೋಲು ಗಳಿಸಿ ತಂದ ಗೆಲುವಿನ ರೂವಾರಿಯಾದರು. ಪುದಿಯೊಕ್ಕಡ ತಂಡದ ಪ್ರದಾನ್ 2 ಗೋಲು ಗಳಿಸಿ ಪ್ರತಿರೋಧ ತೋರಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಐಯಂಡ ತಂಡ ಮುರುವಂಡ ತಂಡದ ಎದುರು 5-4 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಬೀಗಿತು. ಐಯಂಡ ತಂಡದ ಬೋಪಣ್ಣ 1, ಆರ್ಯನ್ 2, ಆಕಾಶ್ 2 ಗೋಲು ಗಳಿಸಿದರು. ಮುರುವಂಡ ತಂಡದ ಕಾರ್ಯಪ್ಪ 1 ಅಪ್ಪಣ್ಣ 2, ಪೊನ್ನಪ್ಪ 1 ಗೋಲು ಗಳಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ 5ನೇ ಪಂದ್ಯದಲ್ಲಿ ಚೇನಂಡ ತಂಡ ಐಚೆಟ್ಟೀರ ತಂಡವವನ್ನು 9-8 ಗೋಲುಗಳಿಂದ ಪರಾಭವಗೊಳಿಸಿತು. ಪಂದ್ಯದ ಆರಂಭದಿಂದಲೂ ಬಿರುಸಿನ ಆಟಕ್ಕಿಳಿದ ಚೇನಂಡ ತಂಡದ ಮೌರ್ಯ 3, ಚಮನ್ 4, ಸೋಮಯ್ಯ 2 ಗೋಲು ಗಳಿಸುವ ಮೂಲಕ ತಂಡಕ್ಕೆ ಅರ್ಹ ಗೆಲುವು ತಂದುಕೊಟ್ಟರು. ಐಚೆಟ್ಟೀರ ತಂಡದ ಲೇಹರ್, ಪೂವಣ್ಣ ತಲಾ 3, ಕಾರ್ಯಪ್ಪ ಬಿದ್ದಪ್ಪ ತಲಾ ಒಂದು ಗೋಲು ಗಳಿಸಿ ತಿರುಗೇಟು ನೀಡಿದರಾದರೂ ಗೆಲವು ಪಡೆಯುವಲ್ಲಿ ಸಫಲರಾಗಲಿಲ್ಲ. ಮಾರ್ಚಂಡ ತಂಡ ಅಪ್ಪಾರಂಡ ತಂಡದ ಎದುರು ವಾಕ್ ಓವರ್ ಪಡೆಯಿತು. ಶಾಂತೆಯಂಡ ತಂಡ ಪುಟ್ಟಿಚಂಡ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಶಾಂತೆಯಂಡ ತಂಡದ ತಿಮ್ಮಯ್ಯ ಮತ್ತು ಉತ್ತಪ್ಪ ತಲಾ ಒಂದು ಗೋಲು ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. ಪುಟ್ಟಿಚಂಡ ತಂಡದ ಆಟಗಾರರು ರಕ್ಷಣಾತ್ಮಕ ಆಟವಾಡಿದ್ದರಿಂದ ಗೋಲು ಗಳಿಸುವಲ್ಲಿ ವಿಫಲರಾದರು. ಮಾಚಿಮಾಡ ತಂಡ ಮುಲ್ಲಂಗಡ ತಂಡದ ವಿರುದ್ಧ ಉತ್ತಮ ಆಟವಾಡಿ 7-2 ಗೋಲುಗಳಿಂದ ಗೆಲುವು ಸಾಧಿಸಿತು. ಮಾಚಿಮಾಡ ತಂಡದ ಚರಣ್ 3 ಗೋಲು ಹೊಡೆದರೆ, ಕಾರ್ಯಪ್ಪ, ದೇಗುಲ್, ಮಂದಣ್ಣ ತಲಾ ಒಂದು ಗೋಲು ಹೊಡೆದರು. ಅತ್ಯುತ್ತಮವಾಗಿ ಆಡಿದ ಚೆಕ್ಕೇರ ತಂಡ ಮುಕ್ಕಾಟೀರ ತಂಡವನ್ನು 9-4 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಶಿಯಾನ್ 4, ಗೋಲು ಗಳಿಸಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು ಬಳಿಕ ಸಿದ್ದಾಂತ್ ಮತ್ತು ಆದರ್ಸ್ ತಲಾ 2, ಮಂದಪ್ಪ 1 ಗೋಲು ಗಳಿಸಿ ತಂಡಕ್ಕೆ ಗೆಲವಿನ ಕಾಣಿಕೆ ನೀಡಿದರು. ಮುಕ್ಕಾಟೀರ ತಂಡದ ನಾಣಯ್ಯ ಅಶ್ವಿನ್ ತಲಾ 2 ಗೋಲು ಗಳಿಸಿದರು. ದಿನದ ಕೊನೆಯ ಪಂದ್ಯದಲ್ಲಿ ಕಾಡ್ಯಮಾಡ ತಂಡ ಬಾಳೆಯಡ ತಂಡದ ವಿರುದ್ಧ 6-4 ಗೋಲುಗಳ ಅಂತರದಿಂದ ಜಯಗಳಿಸಿತು. ಕಾಡ್ಯಮಾಡ ತಂಡದ ಚಿನ್ನಪ್ಪ 3, ಪೊನ್ನಣ್ಣ 1, ಅಯ್ಯಪ್ಪ 2 ಗೋಲು ಹೊಡೆದರೆ, ಬಾಳೆಯಂಡ ತಂಡದ ಪರ ವಿನಿಲ್ 2, ಸೂತನ್ ಮತ್ತು ಕಿರಣ್ 1 ಗೋಲು ಗಳಿಸಿ ಗಮನಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.