ಭರತ್‌, ವಿಕಾಸ್‌ ಮಿಂಚಿನ ಆಟ: ಬೆಂಗಳೂರು ಬುಲ್ಸ್ ತಂಡಕ್ಕೆ ಜಯ ಪುಣೆ: ‘ಸೂಪರ್ 10’ ಸಾಧಿಸಿದ ಭರತ್‌ ಮತ್ತು ಭರ್ಜರಿ ಆಟವಾಡಿದ ವಿಕಾಸ್ ಖಂಡೋಲ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಮತ್ತೊಂದು ಜಯ ತಂದುಕೊಟ್ಟರು. ಇಲ್ಲಿಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಬುಲ್ಸ್ 37–31ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಪರಾಭವಗೊಳಿಸಿತು. ರೇಡರ್ ಭರತ್ 10 ಪಾಯಿಂಟ್ಸ್ ಗಳಿಸಿದರೆ, ವಿಕಾಸ್ ಒಂಬತ್ತು ಪಾಯಿಂಟ್ಸ್ ಕಲೆಹಾಕಿದರು. ತಂಡದ ಇನ್ನೊಬ್ಬ ರೇಡರ್ ನೀರಜ್ ನರ್ವಾಲ್ (5 ಪಾಯಿಂಟ್ಸ್) ಕೊಡುಗೆ ನೀಡಿದರು. ಈ ಜಯದೊಂದಿಗೆ ಬೆಂಗಳೂರು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು. ಜೈಪುರ ಪರ ಅರ್ಜುನ್ ದೇಸ್ವಾಲ್ ಗಳಿಸಿದ 10 ಪಾಯಿಂಟ್ಸ್ ವ್ಯರ್ಥವಾದವು. ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿ ಪೈಪೋಟಿ ನಡೆಸಿದವು. ಮೊದಲಾರ್ಧದ ವೇಳೆಗೆ 19–19ರಿಂದ ಸಮಬಲ ಸಾಧಿಸಿದ್ದವು. ಎರಡೂ ತಂಡಗಳು ತಲಾ ಒಂದು ಬಾರಿ ಆಲೌಟ್‌ ಆದವು. ದ್ವಿತೀಯಾರ್ಧದಲ್ಲಿ ಬುಲ್ಸ್ ಆಟದ ವೇಗವನ್ನು ಹೆಚ್ಚಿಸಿತು. ಈ ಅವಧಿಯಲ್ಲಿ ತಂಡವು 18 ಪಾಯಿಂಟ್ಸ್ ಕಲೆಹಾಕಿದರೆ ಜೈಪುರ 12 ಪಾಯಿಂಟ್ಸ್ ಮಾತ್ರ ಗಳಿಸಿತು. ಒಂದು ಬಾರಿ ಜೈಪುರ ಆಟಗಾರರನ್ನು ಆಲೌಟ್ ಮಾಡುವಲ್ಲಿ ಬೆಂಗಳೂರು ಯಶಸ್ವಿಯಾಯಿತು. ದಿನದ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್‌ 49–39 ಪಾಯಿಂಟ್ಸ್‌ಗಳಿಂದ ದಬಾಂಗ್ ಡೆಲ್ಲಿ ವಿರುದ್ಧ ಗೆದ್ದಿತು. ಇಂದಿನ ಪಂದ್ಯಗಳು ಗುಜರಾತ್ ಜೈಂಟ್ಸ್–ಪಟ್ನಾ ಪೈರೇಟ್ಸ್ (ಆರಂಭ: ರಾತ್ರಿ 7.30) ಯುಪಿ ಯೋಧಾಸ್‌– ತೆಲುಗು ಟೈಟನ್ಸ್ (ಆರಂಭ: ರಾತ್ರಿ 8.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.