ಸಾತ್ವಿಕ್– ಚಿರಾಗ್ ಮೇಲೆ ಕಣ್ಣು ಸಾರ್‌ಬ್ರೂಕನ್‌, ಜರ್ಮನಿ: ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಆತ್ಮವಿಶ್ವಾಸದಲ್ಲಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿಯು ಹೈಲೊ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಲಯ ಮುಂದುವರಿಸುವ ತವಕದಲ್ಲಿದ್ದಾರೆ. ಮಂಗಳವಾರ ಇಲ್ಲಿ ಟೂರ್ನಿ ಆರಂಭವಾಗಲಿದೆ. ಪುರುಷರ ಡಬಲ್ಸ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಭಾರತದ ಜೋಡಿ ಮೊದಲ ಪಂದ್ಯದಲ್ಲಿ ಚೀನಾ ತೈಪೆಯ ಲೀ ಯಾಂಗ್‌– ಲೂ ಚೆನ್ ಅವರನ್ನು ಎದುರಿಸಲಿದೆ. ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ಅವರು ಹಾಂಗ್‌ಕಾಂಗ್‌ನ ಎನ್‌ಜಿ ಕಾ ಲಾಂಗ್ ಸವಾಲು ಎದುರಿಸಲಿದ್ದಾರೆ. ಎಚ್‌.ಎಸ್‌. ಪ್ರಣಯ್‌ ಇಂಡೊನೇಷ್ಯಾದ ಶೇಷರ್ ಹಿರೇನ್‌ ರುಸ್ತಾವಿಟೊ ಅವರಿಗೆ ಮುಖಾಮುಖಿಯಾಗುವರು. ಕಿದಂಬಿ ಶ್ರೀಂಕಾತ್‌ ಅವರು ಚೀನಾದ ಲು ಗುವಾಂಗ್ ಜು ಎದುರು, ಸಮೀರ್ ವರ್ಮಾ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಅವರು ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಪನ್ ಎದುರು, ಆಕರ್ಷಿ ಕಶ್ಯಪ್ ಫ್ರಾನ್ಸ್‌ನ ಲಿಯೊನೈಸ್‌ ಹುಯೆಟ್‌ ವಿರುದ್ಧ ಆಡಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌, ತನಿಶಾ ಕ್ರಾಸ್ತೊ–ಶೃತಿ ಮಿಶ್ರಾ, ಋತುಪರ್ಣಾ ಪಂಡಾ– ಶ್ವೇತಪರ್ಣಾ ಪಂಡಾ, ಸಿಮ್ರಾನ್ ಸಿಂಘಿ– ರಿತಿಕಾ ಟಕ್ಕರ್ ಕೂಡ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.