ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ನಿರಾಸೆ ಪುಣೆ: ಮಿಂಚಿನ ದಾಳಿ ನಡೆಸಿದ ಮೀತು ಶರ್ಮಾ ಹಾಗೂ ಡಿಫೆಂಡರ್ ಅಮೀರ್ ಹುಸೇನ್ ಬಸ್ತಾಮಿ ಅವರ ಅಮೋಘ ಆಟದಿಂದ ಹರಿಯಾಣ ಸ್ಟೀಲರ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಎದುರು ರೋಚಕ ಜಯ ಸಾಧಿಸಿತು. ಬಾಲೆವಾಡಿಯ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹರಿಯಾಣ ತಂಡವು 29–27ರಿಂದ ಬುಲ್ಸ್‌ ತಂಡವನ್ನು ಮಣಿಸಿತು. ಪಂದ್ಯದ ಮೊದಲಾರ್ಧದಲ್ಲಿ ಹರಿಯಾಣ ತಂಡವು 13–10ರಿಂದ ಬುಲ್ಸ್‌ ವಿರುದ್ಧ ಮುನ್ನಡೆಯಲ್ಲಿತ್ತು. ನಂತರದ ಅವಧಿಯಲ್ಲಿ ಬುಲ್ಸ್ ತಂಡವು ದಿಟ್ಟ ಹೋರಾಟ ಮಾಡಿತು. ರೇಡಿಂಗ್‌ನಲ್ಲಿ ಬುಲ್ಸ್ ತಂಡದ ಭರತ್ 10 ಅಂಕ ಗಳಿಸಿದರು. ಕೊನೆಯವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಹರಿಯಾಣ ಎರಡು ಅಂಕಗಳ ಮುನ್ನಡೆಯೊಂದಿಗೆ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು 43–38ರಿಂದ ದಬಂಗ್ ಡೆಲ್ಲಿ ವಿರುದ್ಧ ಜಯಿಸಿತು. ಮೊದಲಾರ್ಧದದ ವಿರಾಮದ ವೇಳೆಗೆ ಪುಣೇರಿ ತಂಡವು 23–17ರಿಂದ ದಬಂಗ್ ವಿರುದ್ಧ ಗೆದ್ದಿತು.ಪುಣೇರಿಯ ರೇಡರ್‌ಗಳಾದ ಆಕಾಶ್ ಶಿಂಧೆ ಹಾಗೂ ಮೋಹಿತ್ ಗೋಯತ್ ಅವರು ತಲಾ 13 ಅಂಕಗಳನ್ನು ಗಳಿಸಿದರು. ದಬಂತ್ ತಂಡದ ನವೀನ್ ಕುಮಾರ್ 16 ಅಂಕಗಳನ್ನು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.