ತಯ್ಯಬ್‌ ಇಕ್ರಂ ಎಫ್ಐಎಚ್‌ ನೂತನ ಅಧ್ಯಕ್ಷ ಲಾಸನ್‌: ಏಷ್ಯನ್‌ ಹಾಕಿ ಫೆಡರೇಷನ್‌ (ಎಎಚ್‌ಎಫ್‌) ಸಿಇಒ ಆಗಿರುವ ಪಾಕಿಸ್ತಾನದ ತಯ್ಯಬ್‌ ಇಕ್ರಂ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ನೂತನ ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾದರು. ವರ್ಚುವಲ್‌ ಆಗಿ ನಡೆದ ಎಫ್‌ಐಎಚ್‌ 48ನೇ ಸಾಮಾನ್ಯ ಸಭೆಯಲ್ಲಿ ಅವರ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು 79–47 ರಲ್ಲಿ ಬೆಲ್ಜಿಯಂನ ಮಾರ್ಕ್‌ ಕಾಡ್ರನ್‌ ಅವರನ್ನು ಮಣಿಸಿದರು. 129 ರಾಷ್ಟ್ರಗಳ ಪ್ರತಿನಿಧಿಗಳು ಮತದಾನದಲ್ಲಿ ಪಾಲ್ಗೊಂಡರು. ಮೂರು ಮತಗಳು ಅಸಿಂಧು ಆದವು. ಭಾರತದ ನರೀಂದರ್‌ ಬಾತ್ರಾ ಅವರ ರಾಜೀನಾಮೆಯಿಂದಾಗಿ ಎಫ್‌ಐಎಚ್‌ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇಕ್ರಂ ಅವರ ಅಧಿಕಾರದ ಅವಧಿ ಎರಡು ವರ್ಷ ಇರಲಿದೆ. ಬಾತ್ರಾ ಜುಲೈ 18 ರಂದು ಹುದ್ದೆ ತೊರೆದಿದ್ದರು. ಆ ಬಳಿಕ ಸೈಫ್‌ ಅಹ್ಮದ್‌ ಅವರು ಎಫ್‌ಐಎಚ್‌ನ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.