ಬ್ಯಾಸ್ಕೆಟ್‌ಬಾಲ್‌: ಸೆಮಿ ಲೀಗ್‌ಗೆ ಬ್ಯಾಂಕ್‌ ಆಫ್‌ ಬರೋಡ ಬೆಂಗಳೂರು: ಬ್ಯಾಂಕ್‌ ಆಫ್‌ ಬರೋಡ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಪುರುಷರ ವಿಭಾಗದಲ್ಲಿ ಸೆಮಿಫೈನಲ್‌ ಲೀಗ್‌ ಪ್ರವೇಶಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬ್ಯಾಂಕ್‌ ಆಫ್‌ ಬರೋಡ ತಂಡ 80–65 ರಲ್ಲಿ ಸದರ್ನ್‌ ಬ್ಲೂಸ್‌ ತಂಡವನ್ನು ಮಣಿಸಿತು. ಕಾರ್ತಿಕ್‌ (20 ಪಾಯಿಂಟ್ಸ್‌) ಮತ್ತು ಅರವಿಂದ್‌ (15 ಪಾಯಿಂಟ್ಸ್‌) ಅವರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿಎಂಪಿ, ಯಂಗ್‌ ಓರಿಯನ್ಸ್ ಮತ್ತು ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡಗಳೂ ಸೆಮಿ ಲೀಗ್‌ಗೆ ಅರ್ಹತೆ ಪಡೆದುಕೊಂಡವು. ಸಿಎಂಪಿ 80–67 ರಲ್ಲಿ ಎಂಎನ್‌ಕೆ ರಾವ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ; ಮಂಗಳೂರು 65–45 ರಲ್ಲಿ ಪಿಪಿಸಿ ವಿರುದ್ದ; ಯಂಗ್‌ ಓರಿಯನ್ಸ್ 76–61 ರಲ್ಲಿ ಎಎಸ್‌ಸಿ ಸೆಂಟರ್‌ ವಿರುದ್ಧ ಗೆಲುವು ಪಡೆದವು. ಮಹಿಳೆಯರ ವಿಭಾಗದಲ್ಲಿ ಎಸ್‌ಡಬ್ಲ್ಯುಆರ್‌, ಮೌಂಟ್ಸ್‌ ಕ್ಲಬ್‌, ಡಿವೈಇಎಸ್‌ ಮೈಸೂರು ಮತ್ತು ನಿಟ್ಟೆಯ ಕೆ.ಎಸ್‌.ಹೆಗ್ಡೆ ತಂಡಗಳು ಸೆಮಿ ಲೀಗ್‌ಗೆ ಪ್ರವೇಶ ಪಡೆದುಕೊಂಡವು. ಕೆ.ಎಸ್‌.ಹೆಗ್ಡೆ ತಂಡ 49–22 ರಲ್ಲಿ ಡಿವೈಇಎಸ್‌ ವಿಜಯಪುರ ತಂಡವನ್ನು ಸೋಲಿಸಿತು. ವಿಜೇತ ತಂಡದ ಸಂಧ್ಯಾ 10 ಪಾಯಿಂಟ್ಸ್‌ ತಂದಿತ್ತರು. ಮೌಂಟ್ಸ್ ಕ್ಲಬ್‌ 70–45 ರಲ್ಲಿ ಡಿವೈಇಎಸ್‌ ವಿದ್ಯಾನಗರ ವಿರುದ್ಧ ಗೆದ್ದರೆ, ಡಿವೈಇಎಸ್‌ ಮೈಸೂರು 50–34 ರಲ್ಲಿ ಬಿ.ಸಿ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.