‘ಮಹಿಳೆಯರಿಗೆ ಕ್ರೀಡೆಯಲ್ಲಿ ಅವಕಾಶಗಳು ಹೆಚ್ಚಲಿ’ ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಲಭಿಸಬೇಕು. ಲಿಂಗ ಅಸಮಾನತೆ ಕೊನೆಯಾಗಬೇಕು ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಆಶಿಸಿದರು. ನಗರದಲ್ಲಿ ಮಂಗಳವಾರ ಜಾಬ್‌ಟೆಕ್ ಹಾಗೂ ಆನ್‌ಲೈನ್‌ ಶಿಕ್ಷಣ ಸಂಸ್ಥೆ ಮಸಾಯ್‌ ಸ್ಕೂಲ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕ್ರೀಡೆಯಲ್ಲಿ ಪುರುಷರ ಪ್ರಾಬಲ್ಯವೇ ಇನ್ನೂ ಹೆಚ್ಚಾಗಿದೆ. ಅವಕಾಶಗಳು ದೊರೆತಷ್ಟು ಮಹಿಳೆಯರ ಸಾಧನೆಯೂ ಹೆಚ್ಚಾಗುತ್ತದೆ‘ ಎಂದು ಮಿಥಾಲಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಮಾತನಾಡಿ, ಯೂರೋಪಿಯನ್‌ ಫುಟ್‌ಬಾಲ್‌ ಕ್ಲಬ್‌ಗಳು ಪ್ರತಿಭೆಗಳನ್ನು ಹುಡುಕಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತವೆ. ಅದೇ ರೀತಿ ಭಾರತದಲ್ಲಿ ತಳಮಟ್ಟದಲ್ಲಿ ಪ್ರತಿಭೆಗಳ ಹುಡುಕಾಟ ನಡೆಯಬೇಕು‘ ಎಂದರು. ಹೂಡಿಕೆಗೆ ಸಹಿ: ಮಿಥಾಲಿ ಮತ್ತು ಭುಟಿಯಾ ಇದೇ ವೇಳೆ ಮಸಾಯ್ ಸ್ಕೂಲ್ ಸಂಸ್ಥೆಯೊಂದಿಗೆ ಹೂಡಿಕೆ ಮತ್ತು ಪಾಲುದಾರಿಕೆಗೆ ಸಹಿ ಹಾಕಿದರು. ಹೂಡಿಕೆಯ ಮೊತ್ತವನ್ನು ಬಹಿರಂಗಪಡಿಸಲಿಲ್ಲ. ವಿವಿಧ ಉದ್ದೇಶಗಳಿಗೆ ಸಂಸ್ಥೆಯು ₹ 81 ಕೋಟಿ ನಿಧಿ ಸಂಗ್ರಹಿಸಿದ್ದನ್ನೂ ಇದೇ ವೇಳೆ ಸಂಸ್ಥೆಯ ಅಧಿಕಾರಿಗಳು ಪ್ರಕಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.