ಪ್ರೊ ಲೀಗ್‌ ಹಾಕಿ: ಭಾರತ ಜಯಭೇರಿ ಭುವನೇಶ್ವರ: ಗೋಲ್‌ಕೀಪರ್‌ ಕೃಷ್ಣ ಬಹಾದೂರ್‌ ಪಾಠಕ್‌ ಅವರ ಮಿಂಚಿನ ಪ್ರದರ್ಶನದ ಬಲದಿಂದ ಭಾರತ ತಂಡ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್‌ ತಂಡವನ್ನು 3–1 ರಲ್ಲಿ ಮಣಿಸಿತು. ಭಾನುವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಶೂಟೌಟ್‌ನಲ್ಲಿ ಹರ್ಮನ್‌ಪ್ರೀತ್‌, ರಾಜ್‌ಕುಮಾರ್‌ ಪಾಲ್‌ ಮತ್ತು ಅಭಿಷೇಕ್‌ ಅವರು ಭಾರತದ ಪರ ಗೋಲು ಗಳಿಸಿದರು. ಸ್ಪೇನ್‌ ಪರ ಗೆರಾರ್ಡ್‌ ಕ್ಲೇಪ್ಸ್‌ ಮಾತ್ರ ಯಶ ಕಂಡರು. ಜೋಕಿನ್‌ ಮೆನಿನಿ, ರಫಾಯೆಲ್ ವಿಲಾಲೊಂಗ ಮತ್ತು ಮಾರ್ಕ್‌ ಮಿರಾಲೆಸ್‌ ಅವರ ಪ್ರಯತ್ನವನ್ನು ತಡೆದ ಗೋಲ್‌ಕೀಪರ್‌ ಪಾಠಕ್‌, ಗೆಲುವಿನ ರೂವಾರಿ ಎನಿಸಿಕೊಂಡರು. ನಿಗದಿತ ಅವಧಿಯಲ್ಲಿ ಭಾರತ ತಂಡದ ಎರಡೂ ಗೋಲುಗಳನ್ನು ಹರ್ಮನ್‌ಪ್ರೀತ್‌ (12 ಹಾಗೂ 32ನೇ ನಿ.) ಗಳಿಸಿದರು. ಸ್ಪೇನ್‌ ತಂಡಕ್ಕೆ ಮಿರಾಲೆಸ್‌ (43 ನೇ ನಿ.) ಹಾಗೂ ಪಿಯರ್ ಅಮಾಟ್ (55ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಮೊದಲ ಲೆಗ್‌ನಲ್ಲಿ ಸ್ಪೇನ್‌ ಕೈಯಲ್ಲಿ 2–3 ರಲ್ಲಿ ಸೋತಿದ್ದ ಭಾರತ, ಮುಯ್ಯಿ ತೀರಿಸಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.