ಅಥ್ಲೆಟಿಕ್‌: ವಿಶ್ವ ಚಾಂಪಿಯನ್‌ಷಿಪ್‌ಗೆ ಶ್ರೀಶಂಕರ್‌ ಅರ್ಹತೆ ಭುವನೇಶ್ವರ : ಕೇರಳದ ಮುರಳಿ ಶ್ರೀಶಂಕರ್‌ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್‌ ಕೂಟದ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ 8.41 ಮೀ. ದೂರ ಜಿಗಿದು, ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡರು. ಭಾನುವಾರ ನಡೆದ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ ಅವರು ಈ ದೂರವನ್ನು ಕಂಡುಕೊಂಡರು. ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ನಿಗದಿಪಡಿಸಿರುವ ಅರ್ಹತಾ ಪಟ್ಟ 8.25 ಮೀ. ಆಗಿದೆ. 24 ವರ್ಷದ ಶ್ರೀಶಂಕರ್‌ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ಇದಾಗಿದೆ. ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್‌ ಆಲ್ಡ್ರಿನ್‌ (8.42 ಮೀ.) ಅವರ ಸಾಧನೆ ಸರಿಗಟ್ಟುವ ಅವಕಾಶವನ್ನು ಕೇವಲ 1 ಸೆಂ.ಮೀ. ಅಂತರದಿಂದ ಕಳೆದುಕೊಂಡರು. ಆಲ್ಡ್ರಿನ್‌ ಅವರು 7.83 ಮೀ. ಸಾಧನೆಯೊಂದಿಗೆ ಅರ್ಹತಾ ಹಂತದಲ್ಲಿ ಎರಡನೆಯವರಾದರೆ, ಮುಹಮ್ಮದ್‌ ಅನೀಸ್‌ ಯಹ್ಯಾ (7.71 ಮೀ.) ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಒಟ್ಟು 12 ಸ್ಪರ್ಧಿಗಳು ಸೋಮವಾರ ನಡೆಯಲಿರುವ ಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ. ಶ್ರೀಶಂಕರ್‌ ಹೊರತುಪಡಿಸಿ, ಕಣದಲ್ಲಿದ್ದ ಇತರರಿಗೆ ಏಷ್ಯನ್‌ ಕ್ರೀಡಾಕೂಟದ ಅರ್ಹತಾ ಮಟ್ಟ ಕೂಡಾ ತಲುಪಲು ಆಗಲಿಲ್ಲ. ಭಾರತ ಅಥ್ಲೆಟಿಕ್‌ ಫೆಡರೇಷನ್‌, ಚೀನಾದ ಹಾಂಗ್‌ಜೌನಲ್ಲಿ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟಕ್ಕೆ ನಿಗದಿಪಡಿಸಿರುವ ಅರ್ಹತಾ ಮಟ್ಟ 7.95 ಮೀ. ಆಗಿದೆ. ಅರ್ಹತೆ ಪಡೆಯಲು ಸೋಮವಾರದ ಫೈನಲ್‌ ಮತ್ತೊಂದು ಅವಕಾಶ ಎನಿಸಿಕೊಂಡಿದೆ. ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಕೇರಳದ ಆನ್ಸಿ ಸೋಜನ್ (6.49 ಮೀ.) ಅವರು ಅಗ್ರಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರಲ್ಲದೆ, ಏಷ್ಯನ್‌ ಕ್ರೀಡಾಕೂಟದ ಅರ್ಹತಾ ಮಟ್ಟ (6.45 ಮೀ.) ಸಾಧಿಸಿದರು. ಕೇರಳದ ನಯನಾ ಜೇಮ್ಸ್‌ (6.31 ಮೀ.) ಮತ್ತು ಉತ್ತರ ಪ್ರದೇಶದ ಶೈಲಿ ಸಿಂಗ್ (6.27 ಮೀ.) ಅವರೂ ಫೈನಲ್‌ನಲ್ಲಿ ಸ್ಥಾನ ಪಡೆದರು. ಪುರುಷರ ಷಾಟ್‌ಪಟ್‌ನಲ್ಲಿ ತಜಿಂದರ್‌ಪಾಲ್‌ ಸಿಂಗ್‌ ತೂರ್‌ 18.91 ಮೀ. ಸಾಧನೆಯೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ಅವರಿಗೆ ಏಷ್ಯನ್‌ ಕ್ರೀಡಾಕೂಟದ ಅರ್ಹತಾ ಮಟ್ಟ (19 ಮೀ.) ತಲುಪಲು ಆಗಲಿಲ್ಲ. ಪುರುಷರ ಜಾವೆಲಿನ್‌ ಥ್ರೋನಲ್ಲಿ ಮೂವರು ಅಥ್ಲೀಟ್‌ಗಳು ಏಷ್ಯನ್‌ ಕ್ರೀಡಾಕೂಟದ ಅರ್ಹತಾಮಟ್ಟ (78.23 ಮೀ.) ಸಾಧಿಸಿದರು. ಒಡಿಶಾದ ಕಿಶೋರ್‌ ಕುಮಾರ್‌ ಜೆನಾ (79.96 ಮೀ.) ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರೆ, ಉತ್ತರ ಪ್ರದೇಶದ ಶಿವಪಾಲ್‌ ಸಿಂಗ್‌ (79.35 ಮೀ.) ಮತ್ತು ರಾಜಸ್ಥಾನದ ಅನುಜ್‌ (79.04 ಮೀ.) ಅವರೂ ಅರ್ಹತಾ ಮಟ್ಟ ತಲುಪಿ, ಫೈನಲ್‌ ಪ್ರವೇಶಿಸಿದರು. ಪುರುಷರ 1,500 ಮೀ. ಓಟದಲ್ಲಿ ಫೈನಲ್‌ ಪ್ರವೇಶಿಸಿದ ನಾಲ್ವರು ಏಷ್ಯನ್‌ ಕ್ರೀಡಾಕೂಟದ ಅರ್ಹತೆಗೆ ನಿಗದಿಪಡಿಸಿದ್ದ 3 ನಿ.47.84 ಸೆ. ಸಮಯ ಕಂಡುಕೊಂಡರು. ಆದರೆ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಇಬ್ಬರಿಗೆ ಮಾತ್ರ ಅವಕಾಶವಿದೆ. ಉತ್ತರ ಪ್ರದೇಶದ ಅಜಯ್‌ ಕುಮಾರ್‌ (3 ನಿ. 44.13 ಸೆ.), ಯೂನುಸ್‌ ಶಾ (3 ನಿ. 44.22 ಸೆ.), ಉತ್ತರಾಖಂಡದ ಸಚ್ಚೇಲಾಲ್‌ ಪಟೇಲ್‌ (3 ನಿ. 44.33 ಸೆ.) ಹಾಗೂ ರಾಜಸ್ಥಾನದ ರಾಹುಲ್‌ (3 ನಿ. 46. 73 ಸೆ.) ಅವರು ಅರ್ಹತೆ ಪಡೆದ ಅಥ್ಲೀಟ್‌ಗಳು. ರಾಷ್ಟ್ರೀಯ ದಾಖಲೆ ಹೊಂದಿರುವ ಕೇರಳದ ಜಿನ್ಸನ್‌ ಜಾನ್ಸನ್ (3 ನಿ. 48.83 ಸೆ.) ಅವರೂ ಫೈನಲ್‌ನಲ್ಲಿ ಸ್ಥಾನ ಪಡೆದರು. ಸ್ಯಾಂಪಲ್‌ ನೀಡಿದ ಶ್ರೀಶಂಕರ್‌ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದ ಬೆನ್ನಲ್ಲೇ ಮುರಳಿ ಶ್ರೀಶಂಕರ್‌ ಉದ್ದೀಪನ ಮದ್ದು ಪರೀಕ್ಷೆಗಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಅಧಿಕಾರಿಗಳಿಗೆ ಸ್ವಯಂಪ್ರೇರಣೆಯಿಂದ ಸ್ಯಾಂಪಲ್‌ಅನ್ನು ನೀಡಿದ್ದಾರೆ. ‘ಇದು ಫೈನಲ್ ಆಗಿಲ್ಲದ ಕಾರಣ ಸ್ಯಾಂಪಲ್ ನೀಡುವಂತೆ ನಾಡಾ ಅಧಿಕಾರಿಗಳು ಶ್ರೀಶಂಕರ್ ಅವರನ್ನು ಕೇಳಿರಲಿಲ್ಲ. ಆದರೂ ತನ್ನ ಸಾಧನೆ ಬಗ್ಗೆ ಯಾರೂ ಅನುಮಾನಪಡಬಾರದು ಎಂಬ ಕಾರಣ ಸ್ವಯಂಪ್ರೇರಣೆಯಿಂದ ಉದ್ದೀಪನ ಮದ್ದು ಪರೀಕ್ಷೆಗಾಗಿ ಸ್ಯಾಂಪಲ್‌ ನೀಡಿದರು. ಅದನ್ನು ಅವರು (ನಾಡಾ ತಂಡ) ಪಡೆದುಕೊಂಡರು’ ಎಂದು ಶ್ರೀಶಂಕರ್ ಅವರ ತಂದೆ ಮತ್ತು ಕೋಚ್ ಕೂಡಾ ಆಗಿರುವ ಎಸ್.ಮುರಳಿ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.