ಬ್ಯಾಡ್ಮಿಂಟನ್: ಅಶ್ವಿನಿ– ತನೀಷಾಗೆ ಪ್ರಶಸ್ತಿ ನಾಂಟ್, ಫ್ರಾನ್ಸ್‌: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನೀಷಾ ಕ್ರಾಸ್ತೊ ಜೋಡಿ ಫ್ರಾನ್ಸ್‌ನಲ್ಲಿ ನಡೆದ ನಾಂಟ್ ಇಂಟರ್‌ನ್ಯಾಷನಲ್‌ ಚಾಲೆಂಜ್ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಯಿತು. ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 21–15, 21–14 ರಲ್ಲಿ ಚೀನಾ ತೈಪೆಯ ಹುಂಗ್ ಎನ್ ತ್ಸು– ಲಿನ್‌ ಯು ಪೆಯ್ ವಿರುದ್ಧ ಗೆದ್ದಿತು. ಹೊಂದಾಣಿಕೆಯ ಆಟವಾಡಿದ ಅಶ್ವಿನಿ– ತನೀಷಾ 31 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಮೊದಲ ಗೇಮ್‌ನಲ್ಲಿ 0–4 ರಲ್ಲಿ ಹಿನ್ನಡೆಯಲ್ಲಿದ್ದ ಭಾರತದ ಜೋಡಿ ಮರುಹೋರಾಟ ನಡೆಸಿ 10–10 ರಲ್ಲಿ ಸಮಬಲ ಸಾಧಿಸಿತು. ಆ ಬಳಿಕ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿ 21–15 ರಲ್ಲಿ ಗೇಮ್‌ ಗೆದ್ದಿತು. ಎರಡನೇ ಗೇಮ್‌ನ ಆರಂಭದಲ್ಲಿ 3–3 ರಲ್ಲಿ ಸಮಬಲ ಸಾಧಿಸಿದ ಬಳಿಕ, ಅಶ್ವಿನಿ– ತನೀಷಾ ಮೇಲುಗೈ ಸಾಧಿಸಿ ಏಳು ಪಾಯಿಂಟ್‌ಗಳ ಅಂತರದಿಂದ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಗೆದ್ದು ‘ಪ್ರಶಸ್ತಿ ಡಬಲ್‌’ ಸಾಧನೆ ಮಾಡಬೇಕೆಂಬ ತನೀಷಾ ಅವರ ಆಸೆ ಕೈಗೂಡಲಿಲ್ಲ. ತನೀಷಾ– ಕೆ.ಸಾಯಿ ಪ್ರಣೀತ್‌ ಜೋಡಿ ಫೈನಲ್‌ನಲ್ಲಿ 21–14, 14–21, 17–21 ರಲ್ಲಿ ಡೆ‌ನ್ಮಾರ್ಕ್‌ನ ಮ್ಯಾಡ್ಸ್ ವೆಸ್ಟರ್‌ಗಾರ್ಡ್‌– ಕ್ರಿಸ್ಟಿನ್ ಬುಷ್‌ ಎದುರು ಪರಾಭವಗೊಂಡಿತು. 51 ನಿಮಿಷ ನಡೆದ ಹೋರಾಟದಲ್ಲಿ ಮೊದಲ ಗೇಮ್‌ ಗೆದ್ದರೂ ಭಾರತದ ಜೋಡಿ, ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು. ‘ಇತ್ತೀಚಿನ ಕೆಲ ಸಮಯಗಳಿಂದ ಯಾವುದೇ ಟೂರ್ನಿ ಗೆದ್ದಿರಲಿಲ್ಲ. ತನೀಷಾ ಮತ್ತು ನಾನು ಕಳೆದ ಜನವರಿಯಿಂದ ಜತೆಗೆ ಆಡುತ್ತಿದ್ದು, ಪ್ರಶಸ್ತಿ ಜಯಿಸಿರುವುದು ನಿಜವಾಗಿಯೂ ಸಂತಸ ಉಂಟುಮಾಡಿದೆ’ ಎಂದು ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.