ತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌ ಮೇಲೆ ಭರವಸೆ ತೈಪೆ : ಇಂಡೊನೇಷ್ಯಾ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದ ಎಚ್‌.ಎಸ್‌. ಪ್ರಣಯ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವರು. ಪುರುಷರ ಸಿಂಗಲ್ಸ್‌ನಲ್ಲಿ 9ನೇ ರ‍್ಯಾಂಕ್‌ ಹೊಂದಿರುವ ಪ್ರಣಯ್‌, ಮಲೇಷ್ಯಾ ಮಾಸ್ಟರ್‌ ಸೂಪರ್‌ 300 ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಇಂಡೊನೇಷ್ಯಾ ಓಪನ್‌ ಟೂರ್ನಿಯಲ್ಲಿ ನಾಲ್ಕರ ಘಟಕ್ಕೆ ತಲುಪಿ, ಶನಿವಾರ ವಿಶ್ವದ ಅಗ್ರಮಾನ್ಯ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್‌ಸನ್‌ ಎದುರು ಸೋತಿದ್ದರು. ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಅವರು, ಅರ್ಹತಾ ಸುತ್ತಿನಲ್ಲಿ ಗೆದ್ದು ಬರುವ ಆಟಗಾರನನ್ನು ಆರಂಭಿಕ ಸುತ್ತಿನಲ್ಲಿ ಎದುರಿಸುವರು. ಭಾರತದ ಮತ್ತೊಬ್ಬ ಆಟಗಾರ ಮೈಸ್ನಮ್‌ ಮೀರಾಬಾ ಅವರು ಐದನೇ ಶ್ರೇಯಾಂಕದ ಆಟಗಾರ ಹಾಂಗ್‌ಕಾಂಗ್‌ನ ಅಂಗಸ್ ಕಾ ಲಾಂಗ್‌ ಅವರನ್ನು ಎದುರಿಸುವರು. ಭಾರತದ ಕಿರಣ್ ಜಾರ್ಜ್, ಸತೀಶ್ ಕುಮಾರ್ ಕರುಣಾಕರನ್, ಮಿಥುನ್ ಮಂಜುನಾಥ್ ಮತ್ತು ಎಸ್. ಶಂಕರ್ ಮುತ್ತುಸಾಮಿ ಸುಬ್ರಹ್ಮಣ್ಯನ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್ ಮತ್ತು ರುತ್ವಿಕಾ ಶಿವಾನಿ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಡೊನೇಷ್ಯಾ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದ್ದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಈ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ಎಂಟನೇ ಶ್ರೇಯಾಂಕದ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್‌ ಗೌಡ್‌ ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಮಹಿಳೆಯ ಡಬಲ್ಸ್‌ನಲ್ಲಿ ರುತುಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ, ಮಿಕ್ಸೆಡ್‌ ಡಬಲ್ಸ್‌ನಲ್ಲಿ ರೋಹನ್‌ ಕಪೂರ್‌– ಎನ್‌.ಸಿಕ್ಕಿ ರೆಡ್ಡಿ ಮತ್ತು ನವನೀತ್‌ ಬೊಕ್ಕಾ– ಪ್ರಿಯಾ ಕೊಂಜೆಂಗ್‌ಬಾಮ್ ಜೋಡಿಯು ಸುಧಾರಿತ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ. - ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.