ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಎರಡನೇ ಸುತ್ತಿಗೆ ಅನ್ವೇಷಾ ಸಿಡ್ನಿ: ಭಾರತದ ಯುವ ಆಟಗಾರ್ತಿ ಅನ್ವೇಷಾ ಗೌಡ ಅವರು ಆಸ್ಟ್ರೇಲಿಯಾ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದೆಹಲಿಯ 14 ವರ್ಷದ ಅನ್ವೇಷಾ 21–9, 21–11 ರಲ್ಲಿ ಆತಿಥೇಯ ದೇಶದ ಪಿಚಾಯ ಎಲಿಸಿಯಾ ವಿರವೊಂಗ್‌ ವಿರುದ್ಧ ಗೆದ್ದರು. ಜೂನಿಯರ್‌ ವಿಭಾಗದಲ್ಲಿ ನಾಲ್ಕು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಅನ್ವೇಷಾ, ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಗೊ ಜಿನ್‌ ವೀ ಅವರ ಸವಾಲನ್ನು ಎದುರಿಸಲಿದ್ದಾರೆ. ಗೊ ಮೊದಲ ಸುತ್ತಿನಲ್ಲಿ 21–15, 21–16 ರಲ್ಲಿ ಭಾರತದ ತಾನ್ಯಾ ಹೇಮಂತ್ ಅವರನ್ನು ಸೋಲಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಋತುಪರ್ಣ ಪಂಡಾ ಮತ್ತು ಶ್ವೇತಪರ್ಣ ಪಂಡಾ ಅವರು ಮೊದಲ ಸುತ್ತಿನಲ್ಲಿ 16–21, 14–21 ರಲ್ಲಿ ಚೀನಾ ತೈಪೆಯ ಲೀ ಚಿಯಾ ಸಿನ್‌– ತೆಂಗ್ ಚುನ್‌ ಸುನ್‌ ಎದುರು ಸೋತರು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಸಮೀರ್‌ ವರ್ಮಾ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದರು. ಮೊದಲ ಸುತ್ತಿನಲ್ಲಿ ಅವರು ಆಸ್ಟ್ರೇಲಿಯಾದ ನಥಾನ್‌ ಟಾಂಗ್ ವಿರುದ್ಧ ಸ್ಪರ್ಧಿಸಬೇಕಿತ್ತು. ಡಬಲ್ಸ್‌ ವಿಭಾಗದಲ್ಲಿ ಸಿಮ್ರಾನ್‌ ಸಿಂಘಿ ಮತ್ತು ರಿತಿಕಾ ಠಾಕರ್‌ ಅವರೂ ಹಿಂದೆ ಸರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.