ಏಷ್ಯನ್‌ ಗೇಮ್ಸ್‌ಗೆ ಕರ್ನಾಟಕದ ಯಶಸ್, ಸಿಂಚಲ್‌ ಅರ್ಹತೆ ಭುವನೇಶ್ವರ: ಕರ್ನಾಟಕದ ಪಿ.ಯಶಸ್‌ ಮತ್ತು ಸಿಂಚಲ್‌ ಕಾವೇರಮ್ಮ ಅವರು ಇಲ್ಲಿ ಕೊನೆಗೊಂಡ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್‌ ಕೂಟದ ಕೊನೆಯ ದಿನ 400 ಮೀ. ಹರ್ಡಲ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡರು. ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಯಶಸ್ 49.37 ಸೆ.ಗಳಲ್ಲಿ ಗುರಿ ತಲುಪಿ ಚಾಂಪಿಯನ್‌ ಆದರು. ಏಷ್ಯನ್‌ ಗೇಮ್ಸ್‌ ಅರ್ಹತೆಗೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ ನಿಗದಿಪಡಿಸಿದ್ದ ಅರ್ಹತಾ ಮಟ್ಟ 49.75 ಸೆ. ಆಗಿದೆ. ಎರಡನೇ ಸ್ಥಾನ ಪಡೆದ ತಮಿಳುನಾಡಿನ ಸಂತೋಷ್‌ ಕುಮಾರ್‌ (49.52 ಸೆ.) ಕೂಡಾ ಅರ್ಹತೆ ಪಡೆದರು. ಮಹಿಳೆಯರ ವಿಭಾಗದಲ್ಲಿ ಸಿಂಚಲ್‌ 56.76 ಸೆ.ಗಳೊಂದಿಗೆ ಎರಡನೇ ಸ್ಥಾನ ಪಡೆದು ಏಷ್ಯನ್‌ ಗೇಮ್ಸ್‌ ಅರ್ಹತಾ ಮಟ್ಟ (57.48 ಸೆ.) ಸಾಧಿಸಿದರು. ತಮಿಳುನಾಡಿನ ಆರ್‌.ವಿದ್ಯಾ ರಾಮರಾಜ್ (56.01 ಸೆ.) ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಪುರುಷರ 200 ಮೀ. ಓಟದಲ್ಲಿ ಕರ್ನಾಟಕದ ಶಶಿಕಾಂತ್‌ ವಿರೂಪಾಕ್ಷ (21.08 ಮೀ.) ಎರಡನೆಯವರಾದರೆ, ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯಾ ಶೆಟ್ಟಿ 1.76 ಮೀ. ಸಾಧನೆಯೊಂದಿಗೆ ಮೂರನೇ ಸ್ಥಾನ ಗಳಿಸಿದರು. ಪುರುಷರ ಲಾಂಗ್‌ಜಂಪ್‌ನಲ್ಲಿ ನಿರೀಕ್ಷೆಯಂತೆಯೇ ಕೇರಳದ ಮುರಳಿ ಶ್ರೀಶಂಕರ್‌ (8.29 ಮೀ.) ಅಗ್ರಸ್ಥಾನ ಪಡೆದರು. ಅವರು ಭಾನುವಾರ ಅರ್ಹತಾ ಹಂತದಲ್ಲಿ 8.41 ಮೀ. ದೂರ ಜಿಗಿದು ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಶೈಲಿ ಸಿಂಗ್‌ (6.49 ಮೀ.) ಅವರನ್ನು ಹಿಂದಿಕ್ಕಿದ ಕೇರಳದ ಆನ್ಸಿ ಸೋಜನ್‌ (6.51 ಮೀ.) ಅಗ್ರಸ್ಥಾನ ಪಡೆದರು. ಇಬ್ಬರೂ ಏಷ್ಯನ್‌ ಗೇಮ್ಸ್‌ ಅರ್ಹತಾ ಮಟ್ಟ (6.45 ಮೀ.) ದಾಟಿದರು. ಮಹಿಳೆಯರ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದ ಉತ್ತರ ಪ್ರದೇಶದ ಕೆ.ಎಂ.ರಚನಾ (65.03 ಮೀ.) ಮತ್ತು ತಾನ್ಯಾ ಚೌಧರಿ (63.16 ಮೀ.) ಅವರು ಏಷ್ಯನ್‌ ಗೇಮ್ಸ್‌ಗೆ (ಅರ್ಹತಾ ಮಟ್ಟ: 62.03 ಮೀ.) ಪಡೆದರು. ಮಹಿಳೆಯರ ಶಾಟ್‌ಪಟ್‌ (ಅರ್ಹತಾ ಮಟ್ಟ: 16.30 ಮೀ.), 800 ಮೀ. ಓಟ (ಅರ್ಹತಾ ಮಟ್ಟ: 2 ನಿ. 4.57 ಸೆ.) ಮತ್ತು ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ (ಅರ್ಹತಾ ಮಟ್ಟ: 78.23 ಮೀ.) ಮೊದಲ ಮೂರು ಸ್ಥಾನಗಳನ್ನು ಪಡೆದರು ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದರು. ಪುರುಷರ 1,500 ಮೀ. ಓಟದ ಫೈನಲ್‌ನಲ್ಲಿ ಸ್ಪರ್ಧಿಸಿದ 12 ಅಥ್ಲೀಟ್‌ಗಳಲ್ಲಿ 11 ಮಂದಿ ಕೂಡಾ ಏಷ್ಯನ್‌ ಗೇಮ್ಸ್‌ ಅರ್ಹತಾ ಮಟ್ಟ (3 ನಿ. 47.84 ಸೆ.) ಸಾಧಿಸಿ ಗಮನ ಸೆಳೆದರು. ಅಂತಿಮ ದಿನದ ಆಯ್ದ ಫಲಿತಾಂಶ: ಪುರುಷರ ವಿಭಾಗ: 400 ಮೀ. ಹರ್ಡಲ್ಸ್: ಪಿ.ಯಶಸ್‌ (ಕರ್ನಾಟಕ, ಕಾಲ: 49.37 ಸೆ.)–1, ಸಂತೋಷ್‌ ಕುಮಾರ್‌ (ತಮಿಳುನಾಡು)–2, ಜಾಬಿರ್‌ (ಕೇರಳ)–3 1,500 ಮೀ. ಓಟ: ಜಿನ್ಸನ್‌ ಜಾನ್ಸನ್ (ಕೇರಳ, ಕಾಲ: 3 ನಿ. 42.77 ಸೆ.)–1, ಅಜಯ್ ಕುಮಾರ್‌ (ಉತ್ತರ ಪ್ರದೇಶ)–2, ಶಶಿ ಭೂಷಣ್‌ ಸಿಂಗ್‌ (ಬಿಹಾರ)–3 ಲಾಂಗ್‌ಜಂಪ್: ಮುರಳಿ ಶ್ರೀಶಂಕರ್‌ (ಕೇರಳ, ದೂರ: 8.29 ಮೀ.)–1, ಜೆಸ್ವಿನ್‌ ಆಲ್ಡ್ರಿನ್‌ (ತಮಿಳುನಾಡು)–2, ಪಿ.ಡೇವಿಡ್‌ (ತಮಿಳುನಾಡು)–3 ಜಾವೆಲಿನ್‌ ಥ್ರೋ: ರೋಹಿತ್‌ ಯಾದವ್‌ (ಉತ್ತರ ಪ್ರದೇಶ, ದೂರ: 83.28 ಮೀ.)–1, ಕಿಶೋರ್‌ ಕುಮಾರ್‌ ಜೆನಾ (ಒಡಿಶಾ)–2, ಶಿವಪಾಲ್‌ ಸಿಂಗ್‌ (ಉತ್ತರ ಪ್ರದೇಶ)–3 ಮಹಿಳೆಯರ ವಿಭಾಗ: 400 ಮೀ. ಹರ್ಡಲ್ಸ್: ಆರ್.ವಿದ್ಯಾ ರಾಮರಾಜ್ (ತಮಿಳುನಾಡು, ಕಾಲ: 56.01 ಸೆ.)–1, ಸಿಂಚಲ್‌ ಕಾವೇರಮ್ಮ (ಕರ್ನಾಟಕ, 56.76 ಸೆ.)–2, ಆರ್‌.ಅನು (ಕೇರಳ)–3 800 ಮೀ. ಓಟ: ಚಂದಾ (ದೆಹಲಿ; ಕಾಲ: 2 ನಿ. 3.82 ಸೆ.)–1, ಹರ್‌ಮಿಲನ್‌ ಬೈನ್ಸ್‌ (ಪಂಜಾಬ್‌)–2, ಕೆ.ಎಂ.ದೀಕ್ಷಾ (ಮಧ್ಯಪ್ರದೇಶ)–3 ಲಾಂಗ್‌ಜಂಪ್‌: ಆನ್ಸಿ ಸೋಜನ್ (ಕೇರಳ, ದೂರ: 6.51 ಮೀ.)–1, ಶೈಲಿ ಸಿಂಗ್‌ (ಉತ್ತರ ಪ್ರದೇಶ)–2, ಭವಾನಿ ಯಾದವ್‌ (ಆಂಧ್ರ ಪ್ರದೇಶ)–3 ಹ್ಯಾಮರ್‌ ಥ್ರೋ: ಕೆ.ಎಂ.ರಚನಾ (ಉತ್ತರ ಪ್ರದೇಶ, ದೂರ: 65.03 ಮೀ.)–1, ತಾನ್ಯಾ ಚೌಧರಿ (ಉತ್ತರ ಪ್ರದೇಶ)–2, ರೇಣು (ಹರಿಯಾಣ)–3 ಶಾಟ್‌ಪಟ್‌: ಕಿರಣ್ ಬಲಿಯಾನ್ (ಉತ್ತರ ಪ್ರದೇಶ, ದೂರ: 17.17 ಮೀ.)–1, ಮನ್‌ಪ್ರೀತ್ ಕೌರ್‌ (ಹರಿಯಾಣ)–2, ಅಭಾ ಕಥುವ (ಮಹಾರಾಷ್ಟ್ರ)–3 - - ತಜಿಂದರ್‌ ದಾಖಲೆ ಪುರುಷರ ಶಾಟ್‌ಪಟ್‌ ಸ್ಪರ್ಧಿ ತಜಿಂದರ್‌ ಪಾಲ್‌ ತೂರ್‌ ತಮ್ಮದೇ ಹೆಸರಿನಲ್ಲಿರುವ ಏಷ್ಯನ್‌ ದಾಖಲೆ ಮುರಿದರಲ್ಲದೆ ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದರು. ಪಂಜಾಬ್‌ನ 28 ವರ್ಷದ ಅಥ್ಲೀಟ್‌ 21.77 ಮೀ. ಸಾಧನೆ ಮಾಡಿದರು. 2021 ರಲ್ಲಿ ಪಟಿಯಾಲದಲ್ಲಿ ನಡೆದಿದ್ದ ಕೂಟದಲ್ಲಿ 21.49 ಮೀ. ದೂರ ಎಸೆದದ್ದು ಅವರ ಈ ಹಿಂದಿನ ಏಷ್ಯನ್‌ ದಾಖಲೆಯಾಗಿತ್ತು. ವಿಶ್ವ ಚಾಂಪಿಯನ್‌ಷಿಪ್‌ಗೆ 21.40 ಮೀ. ಮತ್ತು ಏಷ್ಯನ್‌ ಗೇಮ್ಸ್‌ಗೆ 19 ಮೀ. ಅರ್ಹತಾ ಮಟ್ಟ ನಿಗದಿಪಡಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.