ಯೂತ್‌ ಬಾಕ್ಸಿಂಗ್‌: ವಿಶ್ವನಾಥ್‌ ಶುಭಾರಂಭ ನವದೆಹಲಿ (ಪಿಟಿಐ): ಭಾರತದ ವಿಶ್ವನಾಥ್‌ ಸುರೇಶ್‌ ಅವರು ಸ್ಪೇನ್‌ನಲ್ಲಿ ನಡೆಯುತ್ತಿರುವ ಐಬಿಎ ವಿಶ್ವ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು. ಮಂಗಳವಾರ ನಡೆದ ಪುರುಷರ 48 ಕೆ.ಜಿ. ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು 3–2 ರಲ್ಲಿ ಐರ್ಲೆಂಡ್‌ನ ಪಾಟ್ಸಿ ಜಾಯ್ಸ್‌ ವಿರುದ್ಧ ಗೆದ್ದರು. ವಿಶ್ವನಾಥ್ ಅವರು ಈ ವರ್ಷದ ಆರಂಭದಲ್ಲಿ ಜೋರ್ಡಾನ್‌ನಲ್ಲಿ ನಡೆದಿದ್ದ ಎಎಸ್‌ಬಿಸಿ ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. 13 ಪುರುಷರು ಮತ್ತು 12 ಮಹಿಳೆಯರು ಸೇರಿದಂತೆ ಭಾರತದ ಒಟ್ಟು 25 ಬಾಕ್ಸರ್‌ಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೆಲವು ಬಾಕ್ಸರ್‌ಗಳು ನೇರವಾಗಿ ಪ್ರೀ ಕ್ವಾರ್ಟರ್‌ ಫೈನಲ್‌ ಮತ್ತು ಕ್ವಾರ್ಟರ್‌ ಫೈನಲ್‌ನಿಂದ ತಮ್ಮ ಪೈಪೋಟಿ ಆರಂಭಿಸಲಿದ್ದಾರೆ. ಕಳೆದ ಬಾರಿಯ ವಿಶ್ವ ಯೂತ್‌ ಬಾಕ್ಸಿಂಗ್‌ನಲ್ಲಿ ಭಾರತ ತಂಡ ಎಂಟು ಚಿನ್ನ ಸೇರಿದಂತೆ ಒಟ್ಟು 11 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.