ಜರ್ಮನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ನಾರಾಯಣನ್‌ಗೆ ಅವಮಾನ ಚೆನ್ನೈ: ಬಂಡೆಸ್‌ಲಿಗಾ ಚೆಸ್‌ ಲೀಗ್‌ನಲ್ಲಿ ಆಡಲು ಜರ್ಮನಿಗೆ ತೆರಳಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಎಲ್‌. ನಾರಾಯಣನ್‌ ‘ಅವಮಾನ‘ ಅನುಭವಿಸಿದ್ದಾರೆ. ಸೋಮವಾರ ನಡೆಯಬೇಕಿದ್ದ ಪಂದ್ಯಕ್ಕೂ ಮೊದಲು ಅವರನ್ನು ಲೋಹ ಶೋಧಕ ತಪಾಸಣೆಯ ಸಂದರ್ಭದಲ್ಲಿ ಬರಿಗಾಲಿನಲ್ಲಿ ನಿಲ್ಲಿಸಲಾಗಿತ್ತು. ಈ ಕುರಿತು ನಾರಾಯಣನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಲೋಹ ಶೋಧಕ ತಪಾಸಣೆಯ ಸಂದರ್ಭದಲ್ಲಿ ‘ಬೀಪ್‘ ಶಬ್ದ ಉಂಟಾಯಿತು. ಹೀಗಾಗಿ ಅವರ ಬೂಟು ಮತ್ತು ಸಾಕ್ಸ್‌ ಬಿಚ್ಚಿಸಿ ನಿಲ್ಲಿಸಲಾಯಿತು. ಆದರೆ ಆ ಶಬ್ದ ಬಂದಿದ್ದು ನೆಲದ ಮೇಲೆ ಹಾಸಿದ್ದ ಕಾರ್ಪೆಟ್‌ನಿಂದ ಎಂದು ಬಳಿಕ ಗೊತ್ತಾಗಿದೆ. ಈ ರೀತಿಯ ತಪಾಸಣೆಗಳು ಈ ಮೊದಲು ನಡೆದಿವೆ. ಆದರೆ ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಅಮೆರಿಕದ ಹ್ಯಾನ್ಸ್ ನೀಮನ್ ಅವರು ಮೋಸದಾಟದ ಆರೋಪ ಮಾಡಿದ ಬಳಿಕ ಆಟಗಾರರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ‘ನನಗೆ ಅವಮಾನವಾಗಿದೆ. ಈ ಕುರಿತು ಮೌನವಾಗಿದ್ದರೆ ನನಗೆ ಮತ್ತು ಈ ರೀತಿಯ ಅವಮಾನ ಎದುರಿಸುವ ಕ್ರೀಡಾಪಟುಗಳಿಗೆ ನ್ಯಾಯ ಸಲ್ಲಿಸಿದಂತಾಗುತ್ತಿರಲಿಲ್ಲ‘ ಎಂದು ನಾರಾಯಣನ್ ಟ್ವೀಟ್ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.