ಏಷ್ಯನ್‌ ಫೆನ್ಸಿಂಗ್‌ನಲ್ಲಿ ಕಂಚು: ಭವಾನಿ ಚಾರಿತ್ರಿಕ ಸಾಧನೆ ನವದೆಹಲಿ: ಒಲಿಂಪಿಯನ್‌ ಸಿ.ಎ.ಭವಾನಿ ದೇವಿ ಅವರು ಚೀನಾದ ವುಕ್ಸಿ ನಗರದಲ್ಲಿ ನಡೆಯುತ್ತಿರುವ ಏಷ್ಯನ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್ಸ್‌ನ ಸೇಬರ್‌ ವಿಭಾಗದಲ್ಲಿ ಸೋಮವಾರ ಕಂಚಿನ ಪದಕ ಗೆದ್ದುಕೊಂಡು ಇತಿಹಾಸ ನಿರ್ಮಿಸಿದರು. ಭಾರತ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದುಕೊಂಡ ಪ್ರಪ್ರಥಮ ಪದಕ ಇದು. ಬೆಳಿಗ್ಗೆ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಆಗಿರುವ ಜಪಾನ್‌ನ ಮಿಸಾಕಿ ಎಮುರಾ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದ ಚೆನ್ನೈನ ಭವಾನಿ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಜೇನಾಬ್‌ ದಯಿಬೆಕೊವಾ ಅವರೆದುರು ಸೋಲನುಭವಿಸಿದರು. ಮಿಸಾಕಿ ಕೈರೊದಲ್ಲಿ 2022ರಲ್ಲಿ ನಡೆದ ವಿಶ್ವ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನ ಸೇಬರ್‌ನಲ್ಲಿ ಚಿನ್ನ ಗೆದ್ದಿದ್ದರು. ಇದು ಮಿಸಾಕಿ ವಿರುದ್ಧ ಭವಾನಿಗೆ ಮೊದಲ ಜಯ ಕೂಡ. ಈ ಹಿಂದಿನ ಸೆಣಸಾಟಗಳಲ್ಲಿ ಸೋಲನುಭವಿಸಿದ್ದರು. 64 ಸ್ಪರ್ಧಿಗಳ ವಿಭಾಗದ ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದ ಭವಾನಿ, ಎರಡನೇ ಸುತ್ತಿನಲ್ಲಿ ಕಜಕಸ್ತಾನದ ದೋಸ್ಪೆ ಕರಿನಾ ಅವರನ್ನು ಮಣಿಸಿದ್ದರು. ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಒಝಾಕಿ ಸೆರಿ ವಿರುದ್ಧ ಗೆಲುವು ಸಾಧಿಸಿದ್ದರು. ಭವಾನಿ ಅವರನ್ನು ಭಾರತ ಫೆನ್ಸಿಂಗ್‌ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿನಂದಿಸಿದ್ದಾರೆ. ‘ಭಾರತಕ್ಕೆ ಫೆನ್ಸಿಂಗ್‌ನಲ್ಲಿ ಇದು ಅತ್ಯಂತ ಹೆಮ್ಮೆಯ ಕ್ಷಣ. ಈ ಹಿಂದೆ ಯಾರೂ ಸಾಧಿಸದ್ದನ್ನು ಭವಾನಿ ಅವರು ಸಾಧಿಸಿ ತೋರಿಸಿದ್ದಾರೆ. ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತದ ಮೊದಲ ಫೆನ್ಸರ್‌ ಅವರಾಗಲಿದ್ದಾರೆ. ಫೆನ್ಸಿಂಗ್‌ ಆಟಕ್ಕೆ ಸಂಬಂಧಿಸಿದ ದೇಶದ ಎಲ್ಲರ ಪರವಾಗಿ ಅವರಿಗೆ ಅಭಿನಂದಿಸುವೆ’ ಎಂದು ಮೆಹ್ತಾ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.