ಟೇಬಲ್ ಟೆನಿಸ್: ಕೋಲ್ಕತ್ತ, ಮುಂಬೈ ಪಾರಮ್ಯ ಮಂಗಳೂರು: ಕೋಲ್ಕತ್ತ ಮತ್ತು ಮುಂಬೈ ಬಂದರುಗಳ ಆಟಗಾರರು ಗುರುವಾರ ಕೊನೆಗೊಂಡ ಪ್ರಮುಖ ಬಂದರುಗಳ ನಡುವಿನ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪಾರಮ್ಯ ಮೆರೆದರು. ಏಳು ವಿಭಾಗಗಳಲ್ಲಿ ನಡೆದ ಪಂದ್ಯಗಳ ಪೈಕಿ ತಲಾ ಎರಡು ವಿಭಾಗಗಳಲ್ಲಿ ಮುಂಬೈ ಮತ್ತು ಕೋಲ್ಕತ್ತಾ ಪ್ರಥಮ ಸ್ಥಾನ ಗಳಿಸಿತು. ಪುರುಷರ ಸಿಂಗಲ್ಸ್‌ನಲ್ಲಿ ಕೋಲ್ಕತ್ತ ಎಸ್‌ಎಂಪಿಎಯ ಸೌಮಿಕ್ ಸರ್ಕಾರ್‌ ಮುಂಬೈಯ ಎಂಎಂಪಿಎಯ ಸುನಿಲ್ ಕೇಳ್ಕರ್‌ ವಿರುದ್ಧ 4–1ರಲ್ಲಿ ಜಯ ಗಳಿಸಿದರು. ಪುರುಷರ ಡಬಲ್ಸ್‌ನಲ್ಲಿ ಸೌಮಿಕ್ ಸರ್ಕಾರ್‌–ಸಪನ್ ಬಸು ಜೋಡಿ ಸುನಿಲ್ ಕೇಳ್ಕರ್ ಮತ್ತು ಪಂಕಜ್ ಕಾಡೂ ವಿರುದ್ಧ 3–1ರಲ್ಲಿ ಗೆಲುವು ಸಾಧಿಸಿದರು. 45 ವರ್ಷ ಮೇಲಿನ ಪುರುಷರ ವಿಭಾಗದಲ್ಲಿ ನವಮಂಗಳೂರು ಬಂದರು ನಿಗಮದ ಮನೋಜ್ ವರ್ಗೀಸ್‌ ಕಾಂಡ್ಲಾದ ಮಹೇಶ್ ಎಚ್‌ ವಿರುದ್ಧ 3–1ರಲ್ಲಿ ಜಯ ಗಳಿಸಿದರು. ಡಬಲ್ಸ್‌ನಲ್ಲಿ ಮಹೇಶ್ ಎಚ್‌ ಮತ್ತು ಮನೀಶ್ ಎಚ್‌ ಜೋಡಿ 3–0ಯಿಂದ ಕೋಲ್ಕತ್ತದ ಸ್ವ‍‍ಪನ್ ಬಸು ಮತ್ತು ಆನಂದಿ ಲಾಲ್ ಚೌಧರಿ ಎದುರು ಗೆದ್ದರು. 50 ವರ್ಷ ಮೇಲಿನವರ ಸಿಂಗಲ್ಸ್‌ನಲ್ಲಿ ವಿಶಾಖಪಟ್ಟಣದ ರಾಮರಡ್‌ 3–1ರಲ್ಲಿ ಕೋಲ್ಕತ್ತದ ಸುಪ್ರಮಿತ್ ಮಜುಂದಾರ್ ಎದುರು ಗೆದ್ದರು. ಡಬಲ್ಸ್‌ನಲ್ಲಿ ಮುಂಬೈಯ ಯಶವಂತ್ ಮತ್ತು ಬಾಬಾಜಿ ಜೋಡಿ ಚೆನ್ನೈನ ಗೋಪಾಲಕೃಷ್ಣ ಮತ್ತು ಜಾನ್ ಬೋಸ್ಕೊ ವಿರುದ್ಧ 3–2ರಲ್ಲಿ ಗೆದ್ದರು. ಕೋಲ್ಕತ್ತ ಎದುರು 3–1ರಲ್ಲಿ ಗೆದ್ದ ಮುಂಬೈ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.