ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಪಾಕ್‌ ತಂಡ ಇಂದು ಬೆಂಗಳೂರಿಗೆ ಬೆಂಗಳೂರು: ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನ ತಂಡ, ಮಂಗಳವಾರ ರಾತ್ರಿ ಬೆಂಗಳೂರಿಗೆ ತಲುಪಲಿದೆ. ಭಾನುವಾರ ಬರಬೇಕಿದ್ದ ಪಾಕ್‌ ತಂಡದವರು ವೀಸಾ ಲಭಿಸದ ಕಾರಣ ಮಾರಿಷಸ್‌ನಲ್ಲೇ ಉಳಿದುಕೊಂಡಿದ್ದರು. ಸೋಮವಾರ ರಾತ್ರಿಯಷ್ಟೇ ವೀಸಾ ಸಮಸ್ಯೆ ಬಗೆಹರಿದಿದ್ದು, ಮಂಗಳವಾರ ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಾರತ– ಪಾಕ್‌ ಪಂದ್ಯ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ 7.30ಕ್ಕೆ ನಡೆಯಲಿದೆ. ‘ಪಾಕ್‌ ತಂಡದ ಆಗಮನ ವಿಳಂಬವಾಗಿದೆಯಾದರೂ, ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ’ ಎಂದು ಕೆಎಸ್‌ಎಫ್‌ಎ ಮೂಲಗಳು ತಿಳಿಸಿವೆ. ಭುವನೇಶ್ವರದಲ್ಲಿ ಭಾನುವಾರ ನಡೆದಿದ್ದ ಇಂಟರ್‌ಕಾಂಟಿನೆಂಟಲ್‌ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಆಡಿದ್ದ ಭಾರತ ಮತ್ತು ಲೆಬನಾನ್‌ ಸೇರಿದಂತೆ ಸ್ಯಾಫ್‌ನಲ್ಲಿ ಪಾಲ್ಗೊಳ್ಳಲಿರುವ ಇತರ ಏಳು ತಂಡಗಳು ಈಗಾಗಲೇ ಬೆಂಗಳೂರು ತಲುಪಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.