ವಿಂಬಲ್ಡನ್‌ ಚಾಂಪಿಯನ್‌ಷಿಪ್‌ | ವಿಜೇತರಿಗೆ ₹24 ಕೋಟಿ ಬಹುಮಾನ ಲಂಡನ್‌ : ವಿಂಬಲ್ಡನ್‌ ಚಾಂಪಿಯನ್‌ಗಳಿಗೆ ನೀಡುವ ಒಟ್ಟು ಬಹುಮಾನದ ಮೊತ್ತವನ್ನು ಶೇ 11ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರಸಕ್ತ ವರ್ಷದಿಂದ ಪುರುಷ ಮತ್ತು ಮಹಿಳಾ ಸಿಂಗಲ್ಸ್‌ನ ವಿಜೇತರು ತಲಾ 3 ಮಿಲಿಯನ್‌ ಡಾಲರ್‌ (ಅಂದಾಜು ₹24 ಕೋಟಿ) ಪಡೆಯಲಿದ್ದಾರೆ. ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿಗಳ ಒಟ್ಟು ಮೊತ್ತವನ್ನು 56.5 ಮಿಲಿಯನ್‌ ಡಾಲರ್‌ಗೆ (ಅಂದಾಜು ₹463 ಕೋಟಿ) ಹೆಚ್ಚಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕದ ಹಿಂದಿನ ವರ್ಷ 2019ಕ್ಕೆ ಹೋಲಿಕೆ ಮಾಡಿದರೆ ಶೇ 17.1ರಷ್ಟು ಏರಿಕೆ ಮಾಡಲಾಗಿದೆ ಎಂದು ಆಲ್ ಇಂಗ್ಲೆಂಡ್‌ ಕ್ಲಬ್‌ ಹೇಳಿದೆ. ಆರಂಭಿಕ ಸುತ್ತಿನ ಆಟಗಾರರನ್ನೂ ಪ್ರೋತ್ಸಾಹಿಸಲು ಆದ್ಯತೆ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಸೋತವರು 69,500 ಡಾಲರ್ (₹56.98 ಲಕ್ಷ) ಪಡೆಯಲಿದ್ದಾರೆ. ಕಳೆದ ವರ್ಷಕ್ಕಿಂತ ಶೇ 10ರಷ್ಟು ಹೆಚ್ಚಿಸಲಾಗಿದೆ. ಸಿಂಗಲ್ಸ್‌ ವಿಜೇತರು 2021ರಲ್ಲಿ ₹17 ಕೋಟಿ, ಕಳೆದ ವರ್ಷ ₹20 ಕೋಟಿ ಬಹುಮಾನ ಪಡೆದಿದ್ದರು. ಈ ಬಾರಿ ವಿಂಬಲ್ಡನ್‌ ಟೂರ್ನಿ ಜುಲೈ 3ರಿಂದ 16ರವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.