ಉಡುಪಿ, ದಕ್ಷಿಣ ಕನ್ನಡ ಚಾಂಪಿಯನ್ ಮಂಗಳೂರು: ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಮೋಘ ಸಾಮರ್ಥ್ಯ ಮೆರೆದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕ್ರೀಡಾಪಟುಗಳು ಪಿಯು ಕಾಲೇಜುಗಳ ರಾಜ್ಯ ಅಥ್ಲೆಟಿಕ್‌ ಕೂಟದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಉಡುಪಿ ಬಾಲಕರು 8 ಚಿನ್ನದೊಂದಿಗೆ 13 ಪದಕ ಗೆದ್ದುಕೊಂಡರೆ, ದಕ್ಷಿಣ ಕನ್ನಡದ ಬಾಲಕಿಯರು 7 ಚಿನ್ನ ಒಳಗೊಂಡಂತೆ 19 ಪದಕಗಳನ್ನು ಕೊರಳಿಗೇರಿಸಿಕೊಂಡರು. ನಗರದ ರಥಬೀದಿ ಪಿಯು ಕಾಲೇಜು ಆಶ್ರಯದಲ್ಲಿ ಮಂಗಳ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಕೂಟದ ಬಾಲಕರ ವಿಭಾಗದಲ್ಲಿ ಉಡುಪಿ 57 ಪಾಯಿಂಟ್ ಕಲೆ ಹಾಕಿದರೆ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ 62 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನ ಗಳಿಸಿತು. ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಮತ್ತು ಬಾಲಕಿಯರ ವಿಭಾಗದಲ್ಲಿ ಉಡುಪಿ ರನ್ನರ್ ಅಪ್ ಆಯಿತು. 8 ಕೂಟ ದಾಖಲೆಗಳಿಗೆ ಸಾಕ್ಷಿಯಾದ ಅಥ್ಲೆಟಿಕ್ಸ್‌ನಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಎಂಜಿಎಂ ಕಾಲೇಜಿನ ಸ್ಪ್ರಿಂಟ್‌ ತಾರೆ ಧ್ರುವ ಬಲ್ಲಾಳ್ ವೈಯಕ್ತಿಕ ಚಾಂಪಿಯನ್ ಎನಿಸಿಕೊಂಡರು. 200 ಮತ್ತು 400 ಮೀಟರ್ಸ್ ಓಟದಲ್ಲಿ ಅವರು ಚಿನ್ನ ಗೆದ್ದುಕೊಂಡಿದ್ದಾರೆ. ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್‌ಷಿಪ್‌ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಜಲಿ ಎ, ಪ್ರತಿಭಾ ಮತ್ತು ಬೆಂಗಳೂರು ಉತ್ತರ ಜಿಲ್ಲೆಯ ಪಾವನ ಹಂಚಿಕೊಂಡರು. ಪ್ರಾಂಜಲಿ ಶಾಟ್‌ಪಟ್‌ನಲ್ಲಿ ಕೂಟ ದಾಖಲೆ ಮತ್ತು ಡಿಸ್ಕಸ್ ಥ್ರೋದಲ್ಲಿ ಚಿನ್ನ ಗಳಿಸಿದರು. ಪಾವನ ಹೈಜಂಪ್‌ನಲ್ಲಿ ಕೂಟ ದಾಖಲೆ ಮತ್ತು ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದರು. ಪ್ರತಿಭಾ 3000 ಮೀಟರ್ಸ್ ಓಟದಲ್ಲಿ ಕೂಟ ದಾಖಲೆ ಮಾಡಿದ್ದು 1500 ಮೀಟರ್ಸ್ ಓಟದಲ್ಲಿ ಚಿನ್ನ ಗಳಿಸಿದ್ದಾರೆ. ಅಂತಿಮ ದಿನದ ಫಲಿತಾಂಶಗಳು: ಬಾಲಕರ 400 ಮೀಟರ್ಸ್ ಓಟ: ಧ್ರುವ ಬಲ್ಲಾಳ್ (ಉಡುಪಿ)–1. ಕಾಲ: 50.2, ರಮೇಶ್ (ಕೊಡಗು)–2, ಭುವನ್ ಪೂಜಾರಿ (ಬೆಳಗಾವಿ)–3; ಕ್ರಾಸ್ ಕಂಟ್ರಿ: ರೋಷನ್ ಬೇಕಲ್‌ (ಬೆಂಗಳೂರು ಉತ್ತರ)–1. ಕಾಲ:18 ನಿಮಿಷ 57.6 ಸೆ, ಗಣಪತಿ ಯೆಲ್ಲಪ್ಪ ಮಲಿಕ್ (ದಕ್ಷಿಣ ಕನ್ನಡ)–2, ವಿಠಲ ಭರಮಪ್ಪ ಕಗ್ಗಣ್ಣವರ (ಚಿಕ್ಕೋಡಿ)–3; ಲಾಂಗ್‌ಜಂಪ್‌: ಸುನಾಲ್ ಸುವರ್ಣ (ಉಡುಪಿ)–1. ಅಂತರ: 6.97ಮೀ, ಎಂ.ಡಿ.ಆದಿಲ (ವಿಜಯಪುರ)–2, ಸುಶಾಂತ್ ಸುವರ್ಣ (ದಕ್ಷಿಣ ಕನ್ನಡ)–3; ಡಿಸ್ಕಸ್ ಥ್ರೋ: ಸುಶಾಂತ್ (ಉಡುಪಿ)–1. ದೂರ: 42.58 ಮೀ, ಎಂ.ಎಸ್.ಶ್ರೀಕಾಂತ್‌ (ದಕ್ಷಿಣ ಕನ್ನಡ)–2, ಚಂದನ ಪೂಜಾರಿ (ಬೆಳಗಾವಿ)–3; 4x100 ಮೀ ರಿಲೆ: ಉಡುಪಿ–1 (ಕಾಲ:43.9ಸೆ), ಬೆಂಗಳೂರು ಉತ್ತರ–2, ದಕ್ಷಿಣ ಕನ್ನಡ–3. ಬಾಲಕಿಯರ 400 ಮೀ ಓಟ: ಎಂ.ಸಿ. ಮಾನಸ (ಕೊಡಗು)–1. ಕಾಲ: 57.9ಸೆ, ಗೀತಾ ಚೌಕಾಶಿ (ದಕ್ಷಿಣ ಕನ್ನಡ)–2, ದಿಶಾ ಅಳಿಗೆ (ಬೆಂಗಳೂರು ದಕ್ಷಿಣ)–3; ಕ್ರಾಸ್ ಕಂಟ್ರಿ: ಪ್ರತಿಭಾ (ದಕ್ಷಿಣ ಕನ್ನಡ)–1. ಕಾಲ: 18 ನಿ 57.6ಸೆ, ನಂದಿನಿ (ಉಡುಪಿ)–2, ಮಹಾಲಕ್ಷ್ಮಿ ಬಸಕಳಿ (ಬಾಗಲಕೋಟೆ)–3; ಲಾಂಗ್‌ಜಂಪ್‌: ಪಾವನ್ ಎನ್‌ (ಬೆಂಗಳೂರು ಉತ್ತರ)–1. ಅಂತರ:5.57 ಮೀ, ದಿಶಾ ಗಣಪತಿ (ಮೈಸೂರು)–2, ಭೂಮಿಕಾ (ಕೊಡಗು)–3; ಶಾಟ್‌ಪಟ್‌: ಪ್ರಾಂಜಲಿ (ದಕ್ಷಿಣ ಕನ್ನಡ)–1. ದೂರ:12.61 ಮೀ, ರೇಯಾ ಎಸ್‌.ಕೆ (ಮೈಸೂರು)–2, ಮಾಧುರ್ಯ (ಉಡುಪಿ)–3; 4x100 ಮೀ ರಿಲೆ: ಬೆಂಗಳೂರು ಉತ್ತರ–1 (ಕಾಲ: 50.4 ಸೆ), ದಕ್ಷಿಣ ಕನ್ನಡ–2, ಬೆಳಗಾವಿ–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.