ಕ್ರೀಡಾ ವೈದ್ಯಕೀಯ ಸೌಲಭ್ಯ ಹೆಚ್ಚಲಿ: ಅಥ್ಲೀಟ್‌ ಪ್ರಮೀಳಾ ಅಯ್ಯಪ್ಪ ಬೆಂಗಳೂರು: ಕ್ರೀಡಾ ವೈದ್ಯಕೀಯ ಸೌಲಭ್ಯಗಳು ಕ್ರೀಡಾಪಟುಗಳಿಗೆ ಹೆಚ್ಚಿನ ರೀತಿಯಲ್ಲಿ ಕ್ರೀಡಾಪಟುಗಳಿಗೆ ಲಭ್ಯವಾಗಬೇಕು ಎಂದು ಒಲಿಂಪಿಯನ್ ಅಥ್ಲೀಟ್‌ ಪ್ರಮೀಳಾ ಅಯ್ಯಪ್ಪ ಅವರು ಹೇಳಿದರು. ಇಲ್ಲಿಯ ಇಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಅರೆನಾ 100ರಲ್ಲಿ ನಡೆಯುತ್ತಿರುವ ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ ವಿಶ್ವ ಅಧಿವೇಶನದಲ್ಲಿ ಅವರು ಮಾತನಾಡಿದರು. ‘ನಾವು ಕ್ರೀಡೆಯಲ್ಲಿ ಸ್ಪರ್ಧಿಸುತ್ತಿದ್ದ ಸಮಯದಲ್ಲಿ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಈಗ ತಂತ್ರಜ್ಞಾನ, ವಿಜ್ಞಾನ ಮುಂದುವರಿದಿದ್ದು, ಸೌಲಭ್ಯಗಳು ಸಿಗುತ್ತಿವೆ. ಇವನ್ನು ಬಳಸಿಕೊಂಡು ಹೆಚ್ಚಿನ ಸಾಧನೆ ಮಾಡಬೇಕು‘ ಎಂದರು. ‘ನಾನು ಕ್ರೀಡೆಯಲ್ಲಿ ಸಾಧನೆ ಮಾಡಲು ಪತಿ ಹೆಚ್ಚಿನ ಪ್ರೇರಣೆ ನೀಡಿದರು. ಮಗಳನ್ನು ಕ್ರೀಡಾಕ್ಷೇತ್ರಕ್ಕೆ ಕರೆತರಲು ಇದು ಕೂಡ ಸ್ಫೂರ್ತಿಯಾಯಿತು.ಈ ರೀತಿಯ ಉಪನ್ಯಾಸಗಳು ಇನ್ನೂ ಹೆಚ್ಚು ನಡೆಯಬೇಕು ಎಂದು ಅವರು ಆಶಿಸಿದರು. ಅಧಿವೇಶನ 19ರಿಂದ ಆರಂಭವಾಗಿದ್ದು ಗುರುವಾರ ಮುಕ್ತಾಯವಾಗಲಿದೆ. ಭಾರತ, ಕ್ರೊವೇಷ್ಯಾ, ಟರ್ಕಿ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ರೊಮೆನಿಯಾ, ಸ್ಲೋವಾಕಿಯಾ, ಇಂಡೋನೆಷ್ಯಾ ಮತ್ತು ಬೋಸ್ನಿಯಾ ದೇಶಗಳ ಪರಿಣತರು ಭಾಗವಹಿಸಿದ್ದಾರೆ. ಸಂಘಟನಾ ಕಾರ್ಯದರ್ಶಿ ಕೆ.ಎಲ್. ಬಿರಾದಾರ್, ಕ್ರೀಡಾ ವೈದ್ಯ ಕಿರಣ ಕುಲಕರ್ಣಿ ಮತ್ತಿತರರು ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.