ಪ್ರೊ ಕಬಡ್ಡಿ: ಜೈಪುರ ಚಾಂಪಿಯನ್‌ ಮುಂಬೈ: ಜಿದ್ದಾಜಿದ್ದಿನ ಹೋರಾಟದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪುಣೇರಿ ಪಲ್ಟನ್ ತಂಡಕ್ಕೆ ಸೋಲುಣಿಸಿ ಒಂಬತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇಲ್ಲಿ ಡೋಮ್ ಎನ್‌ಎಸ್‌ಸಿಐ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಒಳಾಂಗಣದಲ್ಲಿ ಶನಿವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜೈಪುರ 33–29ರಿಂದ ಪುಣೇರಿ ತಂಡವನ್ನು ಮಣಿಸಿತು. ಜೈಪುರ ತಂಡಕ್ಕೆ ಇದು ಎರಡನೇ ಪ್ರಶಸ್ತಿಯಾಗಿದೆ. 2014ರಲ್ಲಿ ನಡೆದ ಟೂರ್ನಿಯ ಮೊದಲ ಆವೃತ್ತಿಯಲ್ಲಿ ತಂಡವು ಚಾಂಪಿಯನ್ ಆಗಿತ್ತು. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ವಿಜೇತ ಜೈಪುರ ಪರ ರೇಡರ್‌ಗಳಾದ ಅರ್ಜುನ್ ದೇಸ್ವಾಲ್‌, ವಿ. ಅಜಿತ್ ಕುಮಾರ್ ಮತ್ತು ಡಿಫೆಂಡರ್‌ ಸುನಿಲ್ ಕುಮಾರ್ ತಲಾ ಆರು ಪಾಯಿಂಟ್ಸ್ ಗಳಿಸಿದರು. ಪುಣೇರಿ ತಂಡಕ್ಕಾಗಿ ಆದಿತ್ಯ ಶಿಂಧೆ (5 ಪಾಯಿಂಟ್ಸ್), ಆಕಾಶ್ ಶಿಂಧೆ (4), ಅಭಿಷೇಕ್ ನಂದರಾಜನ್‌ (4) ಮತ್ತು ಮೊಹಮ್ಮದ್ ನಬಿಬಕ್ಷ್‌ (4) ಆಟ ವ್ಯರ್ಥವಾಯಿತು. ತೀವ್ರ ಪೈಪೋಟಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಜೈಪುರ 14–12ರಿಂದ ಮುಂದಿತ್ತು. ಅದೇ ಲಯ ಮುಂದುವರಿಸಿಕೊಂಡು ದ್ವಿತೀಯಾರ್ಧದಲ್ಲೂ 19–17ರಿಂದ ಮುನ್ನಡೆ ಗಳಿಸಿ ಜಯ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. ಪುಣೇರಿ ತಂಡವು ಇದೇ ಮೊದಲ ಬಾರಿಗೆ ಫೈನಲ್ ತಲುಪಿತ್ತು. ಆದರೆ ಟ್ರೋಫಿ ಜಯದ ಆಸೆ ಈಡೇರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.