ಹಾಕಿ: ಭಾರತ ಮಹಿಳಾ ತಂಡಕ್ಕೆ ಪ್ರಶಸ್ತಿ ವೆಲೆನ್ಸಿಯಾ, ಸ್ಪೇನ್‌: ಭಾರತ ತಂಡವು ಮೊದಲ ಬಾರಿ ನಡೆದ ಎಫ್‌ಐಎಚ್‌ ಮಹಿಳಾ ನೇಷನ್ಸ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತದ ಮಹಿಳೆಯರು 1–0ಯಿಂದ ಆತಿಥೇಯ ಸ್ಪೇನ್ ತಂಡವನ್ನು ಸೋಲಿಸಿದರು. ಆರನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗುರ್ಜಿತ್ ಕೌರ್‌ ಭಾರತ ತಂಡದ ಪರ ಗೋಲು ಗಳಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತ, ಈ ಟೂರ್ನಿಯಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದಿತು. ಸೆಮಿಫೈನಲ್‌ನಲ್ಲಿ ಭಾರತ ಶೂಟೌಟ್‌ನಲ್ಲಿ 2–1ರಿಂದ ಐರ್ಲೆಂಡ್‌ ತಂಡವನ್ನು ಮಣಿಸಿತ್ತು. ಟ್ರೋಫಿ ಗೆಲುವಿನೊಂದಿಗೆ ಭಾರತ ತಂಡವು 2023–24ರ ಎಫ್‌ಐಎಚ್‌ ಮಹಿಳಾ ಪ್ರೊ ಲೀಗ್‌ಗೆ ಬಡ್ತಿ ಪಡೆಯಿತು. ನಗದು ಬಹುಮಾನ: ಚಾಂಪಿಯನ್ ಆದ ತಂಡದ ಆಟಗಾರ್ತಿಯರಿಗೆ ಹಾಕಿ ಇಂಡಿಯಾ ತಲಾ ₹ 2 ಲಕ್ಷ ಮತ್ತು ನೆರವು ಸಿಬ್ಬಂದಿಗೆ ₹ 1 ಲಕ್ಷ ಬಹುಮಾನ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.