ಪ್ರಣಯ್‌ಗೆ ಮತ್ತೆ ಸೋಲು ಬ್ಯಾಂಕಾಕ್‌: ಭಾರತದ ಎಚ್‌.ಎಸ್‌.ಪ್ರಣಯ್‌ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿದರು. ಇದರೊಂದಿಗೆ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡರು. ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಪ್ರಣಯ್ 21-23, 21-17, 19-21 ರಲ್ಲಿ ಚೀನಾದ ಲು ಗುವಾಂಗ್ ಜು ಕೈಯಲ್ಲಿ ಪರಾಭವಗೊಂಡರು. 30 ವರ್ಷದ ಪ್ರಣಯ್‌, ಮೊದಲ ಸುತ್ತಿನಲ್ಲಿ ಜಪಾನ್‌ನ ಕೊದೈ ನರವೊಕಾ ವಿರುದ್ಧ ಸೋತಿದ್ದರು. ಶುಕ್ರವಾರ ನಡೆಯುವ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಪ್ರಣಯ್ ಅವರು ಒಲಿಂಪಿಕ್‌ ಚಾಂಪಿಯನ್‌ ಮತ್ತು ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ ವಿಕ್ಟರ್‌ ಅಕ್ಸೆಲ್ಸೆನ್‌ ಅವರ ಸವಾಲು ಎದುರಿಸಲಿದ್ದಾರೆ. ಒಂದು ಗುಂಪಿನಲ್ಲಿ ಇಬ್ಬರು ಆಟಗಾರರಿಗೆ ಮಾತ್ರ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಇದೆ. ಅಕ್ಸೆಲ್ಸನ್‌ ಜತೆ ನರವೊಕಾ ಅಥವಾ ಗುವಾಂಗ್‌ ಜು ಅವರು ಸೆಮಿಗೆ ಅರ್ಹತೆ ಪಡೆಯಲಿದ್ದಾರೆ. ಪ್ರಣಯ್‌– ಜು ನಡುವಿನ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ಮೊದಲ ಗೇಮ್‌ನಲ್ಲಿ ಇಬ್ಬರೂ 21–21 ರಲ್ಲಿ ಸಮಬಲ ಸಾಧಿಸಿದ್ದರು. ಆ ಬಳಿಕ ಎರಡು ಪಾಯಿಂಟ್ಸ್‌ ತಮ್ಮದಾಗಿಸಿಕೊಂಡ ಚೀನಾದ ಆಟಗಾರ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಪ್ರಣಯ್‌, ಪಂದ್ಯವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ 15–12 ರಲ್ಲಿ ಮುನ್ನಡೆ ಸಾಧಿಸಿದ್ದ ಜು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಮರುಹೋರಾಟ ನಡೆಸಿದ ಪ್ರಣಯ್‌ 16–16 ಹಾಗೂ ಆ ಬಳಿಕ 19–19 ರಲ್ಲಿ ಸಮಬಲ ಸಾಧಿಸಿದರು. ಆದರೆ ಕೊನೆಯಲ್ಲಿ ಒತ್ತಡಕ್ಕೆ ಒಳಗಾಗಿ ಸೋಲೊಪ್ಪಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.