ಕಬಡ್ಡಿ: ಯೋಧಾಸ್‌ಗೆ ಗೆಲುವು ಹೈದರಾಬಾದ್‌: ಚುರುಕಿನ ಆಟವಾಡಿದ ಯು.ಪಿ.ಯೋಧಾಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆಲುವು ಪಡೆದರು. ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಯೋಧಾಸ್‌ 45–41 ಪಾಯಿಂಟ್ಸ್‌ಗಳಿಂದ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿತು. ಏಳು ಪಾಯಿಂಟ್ಸ್‌ ಗಳಿಸಿದ ಸಂದೀಪ್‌ ನರ್ವಾಲ್‌, ತಲಾ ಐದು ಪಾಯಿಂಟ್ಸ್ ತಂದಿತ್ತ ರೋಹಿತ್‌ ತೋಮರ್‌ ಹಾಗೂ ದುರ್ಗೇಶ್ ಕುಮಾರ್‌ ಅವರು ಯೋಧಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಲ್ಟನ್‌ ತಂಡದ ಪರ ಆದಿತ್ಯ ಶಿಂಧೆ 12 ಪಾಯಿಂಟ್ಸ್‌ ಗಳಿಸಿದರು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳ ನಡುವಿನ ಪಂದ್ಯ 51–51 ಪಾಯಿಂಟ್ಸ್‌ಗಳಿಂದ ‘ಟೈ’ನಲ್ಲಿ ಕೊನೆಗೊಂಡಿತು. ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದ ಪ್ರಥಮಾರ್ಧದಲ್ಲಿ ಉಭಯ ತಂಡಗಳು 21–21 ರಲ್ಲಿ ಸಮಬಲ ಸಾಧಿಸಿದ್ದವು. ಪ್ಯಾಂಥರ್ಸ್‌ ಪರ ಅರ್ಜುನ್‌ ದೇಸ್ವಾಲ್‌ (17), ರಾಹುಲ್‌ ಚೌಧರಿ (13) ಮಿಂಚಿದರೆ, ಗುಜರಾತ್‌ ತಂಡದ ಪರ ಸೋನು 14 ಹಾಗೂ ಪ್ರತೀಕ್‌ ದಹಿಯಾ 12 ಪಾಯಿಂಟ್ಸ್‌ ತಂದಿತ್ತರು. ಇಂದಿನ ಪಂದ್ಯಗಳು ಬೆಂಗಳೂರು ಬುಲ್ಸ್‌– ಯು ಮುಂಬಾ ತಮಿಳ್‌ ತಲೈವಾಸ್‌– ಹರಿಯಾಣ ಸ್ಟೀಲರ್ಸ್‌ ಪಟ್ನಾ ಪೈರೇಟ್ಸ್‌– ಬೆಂಗಾಲ್‌ ವಾರಿಯರ್ಸ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.