ನೆಟ್‌ಬಾಲ್‌: ನಾಲ್ಕರ ಘಟ್ಟಕ್ಕೆ ಕರ್ನಾಟಕ ಪುರುಷ, ಮಹಿಳಾ ತಂಡಗಳು ಚಿಕ್ಕಮಗಳೂರು: ಎದುರಾಳಿ ತಂಡಗಳ ಮೇಲೆ ಆಧಿಪತ್ಯ ಸ್ಥಾಪಿಸಿದ ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳು ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್‌ ಸಂಸ್ಥೆ ಮತ್ತು ಚಿಕ್ಕಮಗಳೂರು ಜಿಲ್ಲಾ ನೆಟ್‌ಬಾಲ್‌ ಸಂಸ್ಥೆ ಆಯೋಜಿಸಿರುವ ದಕ್ಷಿಣ ವಲಯ ನೆಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿದವು. ಇಲ್ಲಿನ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದ ಬಿಜಿಎಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಟೂರ್ನಿಯ ಲೀಗ್ ಹಂತದಲ್ಲಿ ಆತಿಥೇಯ ಪುರುಷ ಮತ್ತು ಮಹಿಳೆಯರು ತಲಾ ಎರಡು ಜಯದೊಂದಿಗೆ ಅಗ್ರ ಸ್ಥಾನ ಗಳಿಸಿದರು. ‘ಎ’ ಗುಂಪಿನಲ್ಲಿರುವ ಪುರುಷರ ತಂಡ ಶನಿವಾರ ನಡೆದ ಮೊದಲ ಲೀಗ್‌ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 49–11ರಲ್ಲಿ ಜಯ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಆಂಧ್ರಪ್ರದೇಶ ಎದುರು 45–13ರಲ್ಲಿ ಗೆಲುವು ಸಾಧಿಸಿತು.‌ ಎರಡು ಪಂದ್ಯಗಳಲ್ಲಿ 50 ಪಾಯಿಂಟ್ ಗಳಿಸಿದ ನಿತಿನ್ ಮತ್ತು 39 ಪಾಯಿಂಟ್ ಕಲೆ ಹಾಕಿದ ಚಂದ್ರಶೇಖರ್ ರಾಜ್ಯ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿರುವ ಕೇರಳ ತಂಡ ಪುದುಚೇರಿ ವಿರುದ್ಧ 40–4ರಲ್ಲಿ ಮತ್ತು ತೆಲಂಗಾಣ ವಿರುದ್ಧ 33–7ರಲ್ಲಿ ಜಯ ಗಳಿಸಿತು. ಪುದುಚೇರಿಯನ್ನು 28–18ರಲ್ಲಿ ಮಣಿಸಿದ ತೆಲಂಗಾಣ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು. ಮಹಿಳಾ ವಿಭಾಗದಲ್ಲಿ ‘ಬಿ’ ಗುಂಪಿನಲ್ಲಿರುವ ಕರ್ನಾಟಕ 34-6ರಲ್ಲಿ ತೆಲಂಗಾಣವನ್ನೂ 28–6ರಲ್ಲಿ ಪುದುಚೇರಿಯನ್ನೂ ಮಣಿಸಿ ಅಗ್ರ ಸ್ಥಾನ ಗಳಿಸಿತು. ಎರಡು ಪಂದ್ಯಗಳಲ್ಲಿ ನಂದಿನಿ ಒಟ್ಟು 32 ಮತ್ತು ಮೇಘನಾ 21 ಪಾಯಿಂಟ್ ಗಳಿಸಿದರು. ತೆಲಂಗಾಣವನ್ನು 20-13ರಲ್ಲಿ ಸೋಲಿಸಿದ ಪುದುಚೇರಿ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು. ‘ಎ’ ಗುಂಪಿನ ಪಂದ್ಯಗಳಲ್ಲಿ ಕೇರಳ ತಂಡ ಆಂಧ್ರಪ್ರದೇಶ ವಿರುದ್ಧ 35–7ರಲ್ಲಿ ಮತ್ತು ತಮಿಳುನಾಡು ವಿರುದ್ಧ ಆಂಧ್ರಪ್ರದೇಶ 19-14ರಲ್ಲಿ ಜಯ ಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.